ನವದೆಹಲಿ, ಜೂ 20 (DaijiworldNews/MS): ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಅಮೆರಿಕ, ಈಜಿಪ್ಟ್ ಪ್ರವಾಸಕ್ಕೆ ತೆರಳಿದ್ದಾರೆ. ಪ್ರಧಾನಿಯವರ ಈ ಪ್ರವಾಸ ಜಾಗತಿಕವಾಗಿ ಅತ್ಯಂತ ಕುತೂಹಲ ಕೆರಳಿಸಿದೆ.
ಇಂದಿನಿಂದ ಜೂನ್ 25 ರವರೆಗಿನ ಪ್ರವಾಸದಲ್ಲಿ ಅಮೆರಿಕ ಮತ್ತು ಈಜಿಪ್ಟ್ ದೇಶಕ್ಕೆ ಅವರು ಭೇಟಿ ನೀಡುವರು. ಅಮೆರಿಕದಲ್ಲಿ 4 ದಿನ, ಈಜಿಪ್ಟ್ನಲ್ಲಿ 2 ದಿನ ಪ್ರಧಾನಿ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು, ನ್ಯೂಯಾರ್ಕ್ನಲ್ಲಿ ನೊಬೆಲ್ ವಿಜೇತರ ಪ್ರಮುಖ ಕಾರ್ಯಕ್ರಮದಲ್ಲಿ ಮೋದಿ ಮಿಂಚಲಿದ್ದಾರೆ. 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ವಿಶ್ವಸಂಸ್ಥೆಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದು ಯೋಗ ದಿನಾಚರಣೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಅಲ್ಲಿಂದ ವಾಷಿಂಗ್ಟನ್ಗೆ ತೆರಳಲಿರುವ ಪ್ರಧಾನಿ 22ರಂದು ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಂತರ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದೇ ದಿನ ಸಂಜೆ ಬಿಡೆನ್ ದಂಪತಿ ಆಯೋಜಿಸಿರುವ ಅಧಿಕೃತ ಔತಣಕೂಟದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ
ಜೂನ್ 23ರಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್ ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ, ವಾಷಿಂಗ್ಟನ್ನಲ್ಲಿ ಹಲವು ಕಂಪನಿಗಳ ಸಿಇಒಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರ ಜತೆ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಅನಿವಾಸಿ ಭಾರತೀಯರೊಂದಿಗೂ ಸಂವಾದ ನಡೆಸಲಿದ್ದಾರೆ.
ಅಮೇರಿಕಾ ಪ್ರವಾಸದ ಬಳಿಕ ಈಜಿಪ್ಟ್ ಗೆ ಪ್ರಧಾನಿ ಮೋದಿ ಅಲ್ಲಿ ೧೧ನೇ ಶತಮಾನದ ಪ್ರಸ್ತಿದ್ದ ಅಲ್- ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ. ಇದು ಈಜಿಪ್ಟ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿಯಾಗಿದ್ದು, 1997ರ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್ಗೆ ತೆರಳಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿರುವುದಾಗಿದೆ.