ಬೆಂಗಳೂರು, ಜೂ 20 (DaijiworldNews/HR): ಕಾಂಗ್ರೆಸ್ ಪಕ್ಷವು ಅಕ್ಕಿಯ ವಿಚಾರದಲ್ಲಿ ಕೆಟ್ಟ ರಾಜಕಾರಣ ಮಾಡುತ್ತಿದೆ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅಕ್ಕಿ ಕೊಡುವ ವಿಚಾರದಲ್ಲಿ ಕಾಂಗ್ರೆಸ್ ಪಾರ್ಟಿಯು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಿಜೆಪಿಯನ್ನು, ಪ್ರಧಾನಿ ನರೇಂದ್ರ ಮೋದಿಯವರನ್ನು ಎಳೆದು ತರಲು ಹರ ಸಾಹಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಇನ್ನು ಒಂದು ರಾಜ್ಯದ ಮುಖ್ಯಮಂತ್ರಿ ಎರಡು ಲಕ್ಷ ಟನ್ ಅಕ್ಕಿ ಬೇಡಿಕೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳಿಗಾಗಲಿ, ಕೇಂದ್ರ ಆಹಾರ ನಾಗರೀಕ ಸರಬರಾಜು ಸಚಿವರಾಗಲಿ ಬೇಡಿಕೆ ಇಡಲೇ ಇಲ್ಲ. ಅವರೊಂದಿಗೆ ಮಾತನಾಡುವ ಸೌಜನ್ಯವನ್ನೂ ತೋರಿಸಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಜೂನ್13 ರಂದು ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿಯಿಂದ ಎಫ್ಸಿಐ ಕೇಂದ್ರ ಕಚೇರಿಗೆ ಒಎಂಎಸ್ಎಸ್ ಕೋಟಾದಡಿ ಅಕ್ಕಿ ಮಾರಾಟವನ್ನು ನಿರ್ಬಂಧಿಸಿರುವ ಬಗ್ಗೆ ಆದೇಶ ಬಂದಿದ್ದು, ಈ ತೀರ್ಮಾನವನ್ನು ಜೂನ್ 08 ರಂದು ನಡೆದ ಸಭೆಯಲ್ಲಿ ತೀರ್ಮಾನವಾಗಿತ್ತು. ಈ ಪತ್ರವು ಕರ್ನಾಟಕ ಸರ್ಕಾರಕ್ಕೆ ಬರೆದ ಪತ್ರವಲ್ಲ ಬದಲಿಗೆ ಎಫ್ಸಿಐ ಮುಖ್ಯಸ್ಥರಿಗೆ ಬರೆದಿರುವ ಪತ್ರವಿದು ಎಂದು ವಿವರಿಸಿದ್ದಾರೆ.