ಹುಬ್ಬಳ್ಳಿ,ಜೂ 20 (DaijiworldNews/MS): ರಾಜ್ಯ ಸರ್ಕಾರದ ಸರ್ವರ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದ್ದು, ಸಿಸ್ಟಮ್ಗಳನ್ನು ಇವಿಎಂ ಮಾದರಿಯಲ್ಲಿ ಹ್ಯಾಕ್ ಮಾಡಿದೆ ಎಂಬ ಸತೀಶ್ ಜಾರಕಿಹೊಳಿ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ಧಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜೋಶಿ, ಸಚಿವ ಸತೀಶ್ ಜಾರಕಿಹೊಳಿ ಮಾಡಿರುವ ಆರೋಪದಂತೆ ಹ್ಯಾಕ್ ಆಗಿದ್ದರೆ ಸೈಬರ್ ಕ್ರೈಂನವರಿಗೆ ದೂರು ನೀಡಿ ತನಿಖೆ ಮಾಡಿಸಲಿ. ಅವರ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಗ್ಯಾರಂಟಿ ಯೋಜನೆಗಳನ್ನು ಜನತೆಗೆ ಕೊಡಲಾಗದೆ ಕಾಂಗ್ರೆಸ್ನವರು ಈ ರೀತಿ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ
ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಪೂರೈಸಲು ಹರಸಾಹಸ ಪಡುತ್ತಿದೆ. ಕಾಂಗ್ರೆಸ್ ಪಕ್ಷದ ಕೈಯಲ್ಲಿ ಅಕ್ಕಿ ಕೊಡಲು ಆಗುತ್ತಿಲ್ಲ. ಹೀಗಾಗಿ ಸುಳ್ಳು ಹೇಳುತ್ತಿದೆ ಎಂದು ಹೇಳಿದ್ಧಾರೆ.