ನವದೆಹಲಿ, ಜೂ 22 (DaijiworldNews/MS): ಕೋವಿನ್ ಪೋರ್ಟಲ್ನಿಂದ ಡೇಟಾ ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕವು ಇಬ್ಬರು ವ್ಯಕ್ತಿಗಳನ್ನು ಬಿಹಾರದಲ್ಲಿ ಬಂಧಿಸಿದೆ.
ಪ್ರಮುಖ ಆರೋಪಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಇತರರ ಸೂಕ್ಷ್ಮ ವೈಯಕ್ತಿಕ ವಿವರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ ಟೆಲಿಗ್ರಾಮ್ನಲ್ಲಿ ಸೋರಿಕೆ ಮಾಡಿದ್ದಾನೆ ಎಂಬ ಆರೋಪವಿದೆ. ಇಬ್ಬರ ಪೈಕಿ ಓರ್ವ ಬಾಲಾಪರಾಧಿಯಾಗಿದ್ದಾನೆಂದು ತಿಳಿದುಬಂದಿದೆ.
ನಾಗರಿಕರ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡ ಟೆಲಿಗ್ರಾಮ್ ಬಾಟ್ ಅನ್ನು ರಚಿಸಿದ ನಂತರ ಆರೋಪಿಯನ್ನು ಆತನ ನಿವಾಸದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ತಾಯಿ ಬಿಹಾರದಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನೂ ವಿಚಾರಣೆ ನಡೆಸಲಾಗುತ್ತಿದೆ.
ಭಾರತದಲ್ಲಿ ಕೆಲವು ದಿನಗಳ ಹಿಂದಷ್ಟೇ ಕೋವಿನ್ ಪೋರ್ಟ್ನಲ್ಲಿದ್ದ ಉನ್ನತ ರಾಜಕಾರಣಿಗಳು ಸೇರಿದಂತೆ ಜನಸಾಮಾನ್ಯರ ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ , ವೋಟರ್ ಐಡಿ, ಪಾಸ್ಪೋರ್ಟ್ ಸಂಖ್ಯೆ ಹಾಗೂ ಇನ್ನಿತರ ವೈಯಕ್ತಿ ಮಾಹಿತಿಗಳು ಸೋರಿಕೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷಗಳ ನಾಯಕರು ಆಗ್ರಹಿಸಿದ್ದರು
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯವು, ಕೋವಿನ್ ಪೋರ್ಟಲ್ನಲ್ಲಿನ ಎಲ್ಲ ದತ್ತಾಂಶಗಳು/ಮಾಹಿತಿಗಳು ಸುರಕ್ಷಿತವಾಗಿದೆ. ಯಾವುದು ಸೋರಿಕೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಅಲ್ಲದೆ, ಆಂತರಿಕ ವಿಚಾರಣಾ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಹೇಳಿತ್ತು.