ಭೋಪಾಲ್, ಜೂ 22 (DaijiworldNews/HR): ಮಧ್ಯಪ್ರದೇಶದ ರಾಜ್ಗಢ್ ಪಟ್ಟಣದ ಜನರ ನಿದ್ದೆಗೆಡಿಸಿದ್ದ ಮೋಸ್ಟ್ ವಾಂಟೆಡ್ ಕೋತಿ, ಇಲ್ಲಿವರೆಗೆ 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದ್ದು, ಇದೀಗ ಅದನ್ನು ಸೆರೆ ಹಿಡಿಯುವಲ್ಲಿ ಉಜ್ಜಯಿನಿಯ ರಕ್ಷಣಾ ತಂಡ ಯಶಸ್ವಿಯಾಗಿದೆ.
ಮಧ್ಯಪ್ರದೇಶದ ರಾಜ್ಗಢ್ ಪಟ್ಟಣದ ಸುತ್ತಮುತ್ತಲಿನ ಜನರ ಮೇಲೆ ಕಳೆದ ಕೆಲವು ದಿನಗಳಿಂದ ಕೋತಿಯೊಂದು ದಾಳಿ ನಡೆಸಿ ಜನರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಇನ್ನು ಈ ಕೋತಿಯ ಪರಾಕ್ರಮ ಊರಿನ ಕೆಲ ಮನೆಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಕೋತಿಯ ದಾಳಿಗೆ ಮಕ್ಕಳು, ಯುವಕರು ಸೇರಿ ಹಿರಿಯ ವ್ಯಕ್ತಿಗಳು ಗಾಯಕ್ಕೆ ತುತ್ತಾಗಿದ್ದಾರೆ.
ಕೋತಿಯನ್ನು ಹಿಡಿಯಲು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಕೋತಿ ಹಿಡಿದವರಿಗೆ 21,000 ಬಹುಮಾನವನ್ನೂ ಘೋಷಣೆ ಮಾಡಿತ್ತು. ಅದರಂತೆ ಉಜ್ಜಯಿನಿಯಿಂದ ಬಂದ ರಕ್ಷಣಾ ತಂಡ ಡ್ರೋನ್ ಕ್ಯಾಮೆರಾ ಬಳಸಿ ಕೋತಿಯನ್ನು ಪತ್ತೆ ಹಚ್ಚಿ ಬಳಿಕ ಅರಿವಳಿಕೆ ನೀಡಿ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ತಂಡ ಯಶಸ್ವಿಯಾಗಿದೆ.