ಬೆಂಗಳೂರು, ಜೂ 23 (DaijiworldNews/HR): ಗೃಹ ಲಕ್ಷ್ಮೀ ಯೋಜನೆ ಜಾರಿಯಾದ ಬಳಿಕ ವಿದ್ಯುತ್ ಬಿಲ್ ಹೆಚ್ಚು ಬರುತ್ತಿದೆ ಎಂದು ಅನೇಕರು ಈಗಾಗಲೇ ದೂರು ನೀಡುತ್ತಿದ್ದು, ಈ ನಡುವೆ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವೂ ಆಗಿರೋ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೂ ವಿದ್ಯುತ್ ಶಾಕ್ ತಾಗಿದೆ.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಈ ಬಾರಿ 5 ಲಕ್ಷ ರೂಪಾಯಿಗೂ ಅಧಿಕ ಬಿಲ್ ಬಂದಿದ್ದು, ಮೇ ತಿಂಗಳಿನ ವಿದ್ಯುತ್ ಬಿಲ್ ನೋಡಿ ಸ್ವತಃ ಕುಲಪತಿಗಳೆ ಶಾಕ್ ಆಗಿದ್ದಾರೆ.
ವಿಜಯಪುರ ನಗರದ ಹೊರ ಭಾಗದ ತೊರವಿ ಗ್ರಾಮದ ಬಳಿ ದೊಡ್ಡ ಕ್ಯಾಂಪಸ್ ಹೊಂದಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಏಪ್ರಿಲ್ ತಿಂಗಳ ವಿದ್ಯುತ್ ಬಿಲ್ 3,39,313 ರೂಪಾಯಿ ಬಂದಿತ್ತು. ಮೇ ತಿಂಗಳ ಬಿಲ್ 5,06,302 ಲಕ್ಷ ರೂಪಾಯಿ ಬಿಲ್ ಬಂದಿದೆ.
ಇನ್ನು ವಿವಿ ಆವರಣದಲ್ಲಿ ಸೋಲಾರ್ ವಿದ್ಯುತ್ ಸೌಲಭ್ಯವಿದ್ದು, ಅದನ್ನೇ ಗರಿಷ್ಟ ಮಟ್ಟದಲ್ಲಿ ಬಳಕೆ ಮಾಡಿಕೊಳ್ಳುತ್ತೇವೆ. ಆದರೂ ಸಹ ಮೇ ತಿಂಗಳಿನಲ್ಲಿ ಹೆಚ್ಚಿನ ವಿದ್ಯುತ್ ಬಿಲ್ ಬಂದಿದ್ದು ಶಾಕ್ ನೀಡಿದೆ ಎಂದು ಆಧಿಕಾರಿಗಳು ಹೇಳಿದ್ದಾರೆ.