ಬೆಂಗಳೂರು, ಜೂ 23 (DaijiworldNews/HR): ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಗೆ ಸೇವಾಸಿಂಧು, ಬೆಂಗಳೂರು ಒನ್ ಸೇರಿದಂತೆ ಹಲವು ಕೇಂದ್ರಗಳಲ್ಲಿ ಹಣ ವಸೂಲಿ ಮಾಡುತ್ತಿರುವ ದೂರು ಕೇಳಿಬರುತ್ತಿದ್ದು, ಜನರಿಂದ ಹಣ ಪಡೆಯುವಂತಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆಗೆ ಜನ ಹಣ ತೆಗೆದುಕೊಳ್ಳುವಂತಿಲ್ಲ. ಸೇವಾಸಿಂಧು ಸೇರಿ ಹಲವು ಕೇಂದ್ರಗಳಲ್ಲಿ ಹಣ ಪಡೆಯುವ ದೂರು ಬಂದಿದೆ. ಯಾರೂ ಕೂಡ ಸಾರ್ವಜನಿಕರಿಂದ ಹಣ ಪಡೆಯುವಂತಿಲ್ಲ. ಒಂದು ವೇಳೆ ಹಣ ಪಡೆದರೆ ಅಂತಹ ಏಜೆನ್ಸಿ ಲೈಸೆನ್ಸ್ ರದ್ದುಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು 200 ಯುನಿಟ್ ಉಚಿತ ವಿದ್ಯುತ್ ಕಲ್ಪಿಸುವ ಗೃಹ ಜ್ಯೋತಿ ಯೋಜನೆಗೆ ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್ಟಾಪ್ ಗಳಿಂದ ನೊಂದಾಯಿಸ ಬಹುದು. ಯಾವುದೇ ದಾಖಲೆ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ. ಇನ್ನು ಈ ಸೌಲಭ್ಯಗಳಿಲ್ಲದವರು ಕರೆಂಟ್ ಬಿಲ್, ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನೊಂದಿಗೆ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಸೇವಾಸಿಂಧು ಸೇರಿದಂತೆ ಸರ್ಕಾರ ತಿಳಿಸಿರುವ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.