ಬೆಂಗಳೂರು, ಜೂ 23 (DaijiworldNews/MS): ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಪೈಪೋಟಿ ಜೋರಾಗಿರುವಂತೆಯೇ, "100 ದಿನ ಅವಕಾಶ ಕೊಟ್ಟು ನೋಡಿ" ಎಂದು ವಿ ಸೋಮಣ್ಣ ಬಿಜೆಪಿ ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ ಕೇಳಿದ್ದು ನಿಜ. ಪಕ್ಷವನ್ನು ಹತ್ತಿರದಿಂದ ಬಲ್ಲವನಾಗಿದ್ದು, 45 ವರ್ಷದ ನನ್ನದೇ ಆಗಿರುವ ಅನುಭವವಿದ್ದು ಬಿಜೆಪಿ ಕೊಟ್ಟ ಅನೇಕ ಟಾಸ್ಕ್ಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಹೀಗಾಗಿ ಕೆಟ್ಟ ಪರಿಸ್ಥಿತಿಯಲ್ಲಿ ಒಂದು ಅವಕಾಶ ಕೊಡಿ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಲು ಅವಕಾಶ ಕೇಳಿದ್ದೇನೆ ಎಂದು ಹೇಳಿದ್ದಾರೆ
ನಾನು ಅವಕಾಶ ಕೇಳಿದ್ದು ಕೇವಲ 100 ದಿನ ಮಾತ್ರ. ಒಬ್ಬ ರಾಜ್ಯಾಧ್ಯಕ್ಷ ಯಾವ ರೀತಿ ಸಂಚಲನವನ್ನು ಮೂಡಿಸಬೇಕು ಎಂದು ತೋರಿಸುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂಥ ಸಾಮರ್ಥ್ಯವಿದೆ. ಅವಕಾಶ ಕೊಟ್ಟರೆ ಎಲ್ಲರ ಮನೆಗೆ ಹೋಗಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ