ನವದೆಹಲಿ, ಜೂ 26 (DaijiworldNews/HR): ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಮಾಡಿ ಕಳೆದ ಐದು ತಿಂಗಳ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ತಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಳ್ಳುವುದಾಗಿ ಕುಸ್ತಿಪಟುಗಳು ತಿಳಿಸಿದ್ದಾರೆ.
ನ್ಯಾಯ ಸಿಗುವವರೆಗೂ ಕುಸ್ತಿಪಟುಗಳ ಹೋರಾಟವು ಮುಂದುವರಿಲಿದೆ. ಆದರೆ ರಸ್ತೆಯಲ್ಲಿ ಪ್ರತಿಭಟನೆ ಮಾಡುವುದಿಲ್ಲ. ಪ್ರತಿಭಟನೆಯನ್ನು ನಾವು ನ್ಯಾಯಾಲಯಕ್ಕೆ ಸ್ಥಳಾಂತರಿಸಲಿದ್ದು, ಇನ್ನು ಕೋರ್ಟ್ ನಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕುಸ್ತಿಪಟುಗಳು ತಿಳಿಸಿದ್ದಾರೆ.
ಇನ್ನು ಬಿಜೆಪಿಯ ಸಂಸತ್ ಸದಸ್ಯ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆರೋಪಪಟ್ಟಿ ಸಲ್ಲಿಸುವ ಭರವಸೆಯನ್ನು ಸರ್ಕಾರ ಈಡೇರಿಸಿದೆ ಎಂದು ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಒಂದೇ ರೀತಿಯ ಟ್ವೀಟ್ ಗಳನ್ನು ಪೋಸ್ಟ್ ಮಾಡಿದ್ದಾರೆ.
ಜೂನ್ ಆರಂಭದಲ್ಲಿ ಪೊಲೀಸರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ, ಕ್ರಿಮಿನಲ್ ಬೆದರಿಕೆ ಮತ್ತು ಹಿಂಬಾಲಿಸುವ ಆರೋಪಗಳನ್ನು ದಾಖಲಿಸಿದ ನಂತರ ಕುಸ್ತಿ ಪಟುಗಳು ಈ ತೀರ್ಮಾನಕ್ಕೆ ಬಂದಿದ್ದಾರೆ