ಬಾಗಲಕೋಟೆ, ಜೂ 26 (DaijiworldNews/SM): ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಎದುರೇ ಕೈ ಕೈ ಮಿಲಾಸುವ ಹಂತಕ್ಕೆ ತಲಿಪಿದ್ದ ಸಭೆಯಲ್ಲಿ, ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಕ್ಸಮರ ನಡೆಸಿದರು.
ನಗರದ ಚರಂತಿಮಠ ಸಮುದಾಯ ಭವನದಲ್ಲಿ ಮಧ್ಯಾಹ್ನ 12ಕ್ಕೆ ಸಭೆ ಆರಂಭಗೊಳ್ಳುತ್ತಿದ್ದಂತೆ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಕುರಿತು ಪ್ರಸ್ತಾಪಿಸಿದರು. ಸೋತು ಆಗಿದೆ. ಮುಂದೇನು ಮಾಡಬೇಕು ಎಂಬುದರ ಚರ್ಚೆ ಮಾಡೋಣ ಎಂದು ಹೇಳಿ, ಮಾತು ಮುಗಿಸಿದರು.
ಹೊರ ಹಾಕಲು ಪಟ್ಟು
ಈ ವೇಳೆ ಸಭಿಕರ ಮಧ್ಯೆ ಕುಳಿತಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜು ರೇವಣಕರ, ಕಳೆದ ಚುನಾವಣೆಯಲ್ಲಿ ನಮ್ಮ ವಿರುದ್ಧ ಸೋಲಿಗೆ ಕಾರಣರಾದ ಹಾಗೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು, ಈ ಸಭೆಯಲ್ಲಿ ಕುಳಿತಿದ್ದಾರೆ. ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕರಾಗಿ, ಪಕ್ಷ ವಿರೋಧಿ ಕೆಲಸ ಮಾಡಿವರನ್ನು ಈ ಸಭೆಯಿಂದ ಹೊರ ಹಾಕಬೇಕು. ಇಲ್ಲದಿದ್ದರೆ ನಾವೇ ಹೊರ ಹೋಗುತ್ತೇವೆ ಎಂದರು. ಆಗ ಉಂಟಾದ ಗದ್ದಲ ವಿಕೋಪಕ್ಕೆ ತೆರಳಿತು. ಮೈಕ್ನತ್ತ ಬಂದ ಮಾಜಿ ಶಾಸಕ ವೀರಣ್ಣ ಚರಂತಿಮಠ, ನಾವು ಅಽಕಾರದಲ್ಲಿದ್ದಾಗ ತಲಾ 24 ಲಕ್ಷ ವೆಚ್ಚದಲ್ಲಿ ಶಿವಾಜಿ ಮತ್ತು ಬಸವೇಶ್ವರ ಮೂರ್ತಿ ಸ್ಥಾಪಿಸಲು ಅನುಮತಿ ನೀಡಿದ್ದೇವು. ನಿನ್ನೆ ಆ ಮೂರ್ತಿಗಳು ನಗರಕ್ಕೆ ಬಂದಿದ್ದು, ಪ್ರತಿಷ್ಠಾಪನೆಗೆ ವಿರೋಧ ಮಾಡಿದವರು, ಇಂದು ಸಭೆಗೆ ಬಂದಿದ್ದಾರೆ. ಮೊದಲು ಅವರನ್ನು ಹೊರ ಹಾಕಬೇಕು. ಅದಕ್ಕಾಗಿಯೇ ನಮ್ಮ ಕಾರ್ಯಕರ್ತರು ಸಿಟ್ಟಿಗೆ ಬಂದಿದ್ದಾರೆ ಎಂದರು.
ಈ ವೇಳೆ ಮಾಜಿ ಶಾಸಕ ಚರಂತಿಮಠ ಮತ್ತು ಎಂಎಲ್ಸಿ ಪಿ.ಎಚ್. ಪೂಜಾರ ಬೆಂಬಲಿಗರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ನೀವೇನು ನಮಗೆ ಪ್ರಚಾರಕ್ಕೆ ಕರೆದಿದ್ರಾ ಎಂದು ಪೂಜಾರ ಬೆಂಬಲಿಗರು ವಾದಿಸಿದ್ದರೆ, ಚುನಾವಣೆ ವೇಳೆ ಎರಡು ತಿಂಗಳು ಎಲ್ಲಿ ಹೋಗಿದ್ರಿ. ಬಾಗಲಕೋಟೆಯಲ್ಲಿ ಬಿಜೆಪಿ ಸೋಲಿಗೆ ನೀವೇ ಕಾರಣ ಎಂದು ಚರಂತಿಮಠರ ಬೆಂಬಲಿಗರು ವಾದಕ್ಕಿಳಿದರು.