ನವದೆಹಲಿ, ಜೂ 27 (DaijiworldNews/MS): ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪರ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರವಾಗಿ ಟೀಕಿಸಿದ್ದು, ಹಿಂದೂ ಅವಿಭಕ್ತ ಕುಟುಂಬದ ಕಾನೂನನ್ನು ರದ್ದುಗೊಳಿಸುವಂತೆ ಅವರು ಪ್ರಧಾನಿಗೆ ಸವಾಲು ಹಾಕಿದ್ದಾರೆ.
"ಒಂದು ದೇಶದಲ್ಲಿ ಎರಡೆರಡು ಕಾನೂನುಗಳು ಇರಲು ಹೇಗೆ ಸಾಧ್ಯ? ಶೇ. 90ರಷ್ಟು ಸುನ್ನಿ ಮುಸ್ಲಿಮರಿರುವ ಈಜಿಪ್ಟ್ 80 ರಿಂದ 90 ವರ್ಷಗಳ ಹಿಂದೆ ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಿದೆ. ಇಸ್ಲಾಂನಲ್ಲಿ ‘ತ್ರಿವಳಿ ತಲಾಖ್’ ಅದರ ಭಾಗವಾಗಿದ್ದರೆ, ಅದನ್ನು ಈಜಿಪ್ಟ್, ಇಂಡೋನೇಷಿಯಾ, ಕತಾರ್, ಜೋರ್ಡಾನ್, ಸಿರಿಯಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ಬಹುಪಾಲು ಮುಸ್ಲಿಂ ರಾಷ್ಟ್ರಗಳಲ್ಲೇಕೆ ಆಚರಿಸಲಾಗುತ್ತಿಲ್ಲ" ಎಂದು ಪ್ರಶ್ನಿಸಿ ಪ್ರಧಾನಿ ಮೋದಿ ಏಕರೂಪ ನಾಗರಿಕ ಸಂಹಿತೆ ಪರ ಬ್ಯಾಟ್ ಬೀಸಿದ್ದರು.
ಇದಕ್ಕೆ ಪ್ರತಿಯಾಗಿ "ಭಾರತದ ವೈವಿಧ್ಯತೆ ಮತ್ತು ಅದರ ಬಹುತ್ವವನ್ನು ಸಮಸ್ಯೆ ಎಂದು ಪರಿಗಣಿಸುವ ನೀವು ಹಿಂದೂ ಅವಿಭಕ್ತ ಕುಟೂಂಬದ ಕಾನೂನನ್ನು ರದ್ದುಗೊಳಿಸುತ್ತೀರಾ? ಯುಸಿಸಿ ಹೆಸರಿನಲ್ಲಿ ದೇಶದ ಬಹುತ್ವ ಮತ್ತು ವೈವಿಧ್ಯತೆಯನ್ನು ಕಸಿದುಕೊಳ್ಳುತ್ತೀರಾ? ಪಂಜಾಬ್ನಲ್ಲಿರುವ ಸಿಖ್ಗಳಿಗೆ ಯುಸಿಸಿ ಬಗ್ಗೆ ಹೇಳಿ, ಅಲ್ಲಿ ಪ್ರತಿಕ್ರಿಯೆ ಏನಾಗುತ್ತದೆ ಎಂದು ನೋಡಿ" ಎಂದು ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ತ್ರಿವಳಿ ತಲಾಖ್ ವಿಚಾರದಲ್ಲಿ ಮೋದಿಯವರ ಹೇಳಿಕೆಗೆ ಓವೈಸಿ ಟೀಕಿಸಿದ್ದು, ಹೆಂಡತಿಯನ್ನು ತ್ಯಜಿಸುವವರ ವಿರುದ್ಧ ಕಾನೂನು ರೂಪಿಸಿ ಎಂದು ಹೇಳಿದ್ದಾರೆ.