ಹಾವೇರಿ, ಜೂ 29 (DaijiworldNews/MS): ಸಾವಿರಾರು ಜನರು ಸೇರಿ ಬಕ್ರೀದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಕ್ಷುಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಮುಸ್ಲಿಂ ಯುವಕರು ಬಡಿದಾಡಿಕೊಂಡ ಘಟನೆ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ನಡೆದ ಆಚರಣೆಯ ನಂತರ ಅಂಜುಮನ್ ಕಮಿಟಿ ಲೆಕ್ಕಪತ್ರ ನಿರ್ವಹಣೆ ವಿಚಾರವಾಗಿ ಮುಸ್ಲಿಂ ಯುವಕರು ಬಡಿದಾಡಿಕೊಂಡಿದ್ದಾರೆ. ಮೈದಾನದ ನಿರ್ವಹಣೆಗಾಗಿ ವಂತಿಕೆ ಸಂಗ್ರಹ ವೇಳೆ ಯುವಕರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆಯಲ್ಲಿ ಮುಸ್ತಕಾಅಹ್ಮದ್ ಖಾಜಿ ಎಂಬವನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾವಿರಾರು ಜನರು ಸೇರಿ ಸಾಮೂಹಿಕ ಪ್ರಾರ್ಥನೆ ನಡೆಸಿದ ನಂತರ ಈ ಗಲಾಟೆ ನಡೆದಿದೆ. ಸ್ಥಳಕ್ಕೆ ರಟ್ಟಿಹಳ್ಳಿ ಪೊಲೀಸರು ಆಗಮಿಸಿದ ಬಳಿಕ ಪರಿಸ್ಥಿತಿ ಶಾಂತವಾಗಿದೆ.