ಬೆಂಗಳೂರು, ಜೂ 29 (DaijiworldNews/HR): ವಿವಿಧ ಧರ್ಮ, ಜಾತಿಗೆ ಸೇರಿದ್ದರೂ ನಾವೆಲ್ಲ ಮನುಷ್ಯರೇ, ಹಾಗಾಗಿ ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಇಂದು ಬಕ್ರೀದ್ ಹಬ್ಬದ ಅಂಗವಾಗಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ನಮ್ಮ ನಮ್ಮಲ್ಲೇ ದ್ವೇಷ ಹುಟ್ಟುಹಾಕುವ ಅನೇಕ ಶಕ್ತಿಗಳಿವೆ. ಆ ಶಕ್ತಿಗಳು ಉದ್ದೇಶಪೂರ್ವಕವಾಗಿಯೇ ಇದನ್ನು ಮಾಡುತ್ತವೆ. ಅದಕ್ಕೆ ನಾವು ಸೊಪ್ಪು ಹಾಕುವುದಾಗಲಿ, ಮಹತ್ವ ನೀಡುವುದಾಗಲಿ ಮಾಡಬಾರದು. ಮನುಷ್ಯರು ಪ್ರೀತಿ, ವಿಶ್ವಾಸದಿಂದ , ಮನುಷ್ಯರಂತೆ ಬದುಕುವ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂದರು.
ಇನ್ನು ರಾಜ್ಯದ ಅಭಿವೃದ್ಧಿಯ ಜೊತೆಗೆ ಜನತೆಯೂ ಅಭಿವೃದ್ಧಿ ಯಾಗಬೇಕು. ದೇವರು ಎಲ್ಲರಿಗೂ ಸದ್ಭುದ್ದಿ ನೀಡಿ ಮನುಷ್ಯರಾಗಿ ಬಾಳುವ ಗುಣವನ್ನು ನೀಡಲಿ ಎಂದಿದ್ದಾರೆ.
ಈ ವೇಳೆ ವಸತಿ ಸಚಿವ ಝಮೀರ್ ಅಹಮದ್ ಸೇರಿ ಸಮುದಾಯದ ಮುಖಂಡರು, ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.