ಬೆಂಗಳೂರು, ಜೂ 29 (DaijiworldNews/MS): ಅಕ್ರಮ ಆಸ್ತಿ ಆರೋಪಕ್ಕೆ ಸಂಬಂಧಪಟ್ಟಂತೆ ಕೆ.ಆರ್.ಪುರಂ ತಹಶೀಲ್ದಾರ್ 'ಅಜಿತ್ ರೈ' ಬಂಧನ ಮಾಡಲಾಗಿದೆ. ತಹಶೀಲ್ದಾರ್ ಅಜಿತ್ ರೈ ಮನೆ ಮೇಲೆ ನಿನ್ನೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದ ಲೋಕಾಯುಕ್ತ ಪೊಲೀಸರು ಇಂದು ಪರಿಶೀಲನೆ ಮುಂದುವರಿಸಿದ್ದಾರೆ.
ಹೆಚ್ಚಿನ ವಿಚಾರಣೆಗಾಗಿ ಅವರನ್ನು ಲೋಕಾಯುಕ್ತ ಪೋಲಿಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಮೂಲದ ಅಜಿತ್ ರೈ ಕೆ.ಆರ್ ಪುರದ ತಹಶೀಲ್ದಾರ್ ಆಗಿದ್ದು ಈತನ ಬಳಿಯಿರು ಆಸ್ತಿ-ಪಾಸ್ತಿ ಕಂಡು ಲೋಕಾಯುಕ್ತ ಪೊಲೀಸರೇ ಶಾಕ್ ಆಗಿದ್ದಾರೆ.
ಹಿನ್ನಲೆ ಏನು?
ಅಜಿತ್ ರೈ ಪುತ್ತೂರು ತಾಲೂಕಿನ ಸೊರಕೆ ಮೂಲದವರು. ದಿ.ಆನಂದ್ ರೈ ಸರ್ಕಾರಿ ಸರ್ವೇಯರ್(ಭೂ ಮಾಪಕ) ಆಗಿ ಕೆಲಸ ಮಾಡುತ್ತಿದ್ದರು. ಸರ್ವೇಯರ್ ಆಗಿದ್ದ ತಂದೆ ಆನಂದ ರೈ 51. ವರ್ಷ ವಯಸ್ಸಿನಲ್ಲಿ ಮರಣ ಹೊಂದಿದ್ದರು. ಮರಣ ನಂತರ ಅನುಕಂಪದ ಆಧಾರದಲ್ಲಿ ಅಜಿತ್ ರೈಗೆ ಸರ್ಕಾರಿ ಕೆಲಸ ಸಿಕ್ಕಿತ್ತು.
ಸಣ್ಣ ವಯಸ್ಸಿನಲ್ಲೇ ಕಂದಾಯ ನಿರೀಕ್ಷಕರಾಗಿ ಆಗಿ ಬೆಂಗಳೂರಿನಲ್ಲೇ ಸರ್ಕಾರಿ ಕೆಲಸಕ್ಕೆ ನೇಮಕವಾಗಿದ್ದ ಈತ ಅಲ್ಲಿಂದ ಭಡ್ತಿ ಪಡೆದು ಉಪ ತಹಶೀಲ್ದಾರ್ ಬಳಿಕ ತಹಶಿಲ್ದಾರ್ ಹುದ್ದೆಗೆ ನೇಮಕವಾಗಿದ್ದ. ಓರ್ವ ಸಹೋದರ ಕೂಡ ಬೆಂಗಳೂರಿನಲ್ಲೇ ನೆಲೆಸಿದ್ದು, ಪುತ್ತೂರಿನ ಸೊರಕೆಯಲ್ಲಿ ತಾಯಿ ಮಾತ್ರ ವಾಸವಾಗಿದ್ದಾರೆ
ಬೆಂಗಳೂರಿನಲ್ಲಿ ಸಹಕಾರನಗರ, ಚಂದ್ರಾ ಲೇಔಟ್ ಸೇರಿದಂತೆ ಹಲವೆಡೆ ಐಷಾರಾಮಿ ಮನೆಗಳಿವೆ. 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳನ್ನು, ಐಷಾರಾಮಿ ಕಾರು ಮತ್ತು ಬೈಕ್ಗಳನ್ನು ವಶಕ್ಕೆ ಪಡೆದಿದ್ದರು. ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿದ್ದು, ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ.
ಹಾರ್ಸ್ ರೈಡಿಂಗ್ ಸ್ಕೂಲ್ ಮಾಡಲು ತಯಾರಿ ನಡೆಸುತ್ತಿದ್ದ ಅಜಿತ್ ರೈ ವರ್ಷಕ್ಕೆ ಒಂದು ಕೋಟಿಗೂ ಅಧಿಕ ಆದಾಯ ಹೊಂದಿದ್ದು, ಬೇನಾಮಿ ಹೆಸರಿನಲ್ಲಿ ಅಜಿತ್ ರೈ ಮತ್ತಷ್ಟುಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.