ಬೆಂಗಳೂರು, ಜು 02 (DaijiworldNews/HR): ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಂ ವತಿಯಿಂದ ಕ್ರೈಸ್ತ ಧರ್ನಗುರುಗಳು ಮತ್ತು ಕ್ರೈಸ್ತ ಸಂಘಟನೆಗಳ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿ, ನೂತನ ಮುಖ್ಯಮಂತ್ರಿಗಳಿಗೆ ಅಭಿನಂಧನೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕ್ರೈಸ್ತ ಮುಖಂಡರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ 'ಕರ್ನಾಟಕ ಧಾರ್ಮಿಕ ಸ್ಥಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ' (ಮತಾಂತರ ನಿಷೇಧ)ಗೆ ತರಲಾಗಿದ್ದ ಸಂವಿಧಾನ ವಿರೋಧಿ ತಿದ್ದುಪಡಿಯನ್ನು ರದ್ದುಮಾಡಲು ನಿರ್ಧರಿಸಲಾಗಿದೆ. ಕ್ರೈಸ್ತರು ಸೇರಿದಂತೆ ಎಲ್ಲ ಜನ ಸಮುದಾಯಗಳ ಸಂವಿಧಾನ ಬದ್ದ ಹಕ್ಕುಗಳನ್ನು ರಕ್ಷಿಸಿ ಅಗತ್ಯ ರಕ್ಷಣೆ ನೀಡಲಾಗುವುದು, ಮತಾಂತರ ನಿಷೇಧ ಕಾಯ್ದೆಗೆ ತರಲಾಗಿದ್ದ ಸಂವಿಧಾನ ವಿರೋಧಿ ತಿದ್ದುಪಡಿಯನ್ನು ರದ್ದುಮಾಡಲು ನಿರ್ಧರಿಸಲಾಗಿದೆ ಎಂದು ಉಲ್ಲೇಖಿಸಿದರು.
ಇನ್ನೂ, ಮತಾಂತರ ನಿಷೇಧ ಕಾಯ್ದೆಯಡಿ ಧರ್ಮ ಗುರುಗಳ ಮೇಲೆ ದಾಖ ಲಾಗಿರುವ ಎಲ್ಲ ಸುಳ್ಳು ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಜತೆಗೆ, ಮುಂದಿನ ಆಯವ್ಯಯದಲ್ಲಿ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ವನ್ನು ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಕ್ರೈಸ್ತ ಮುಖಂಡರು ಕ್ರೈಸ್ತ ಅಭಿವೃದ್ದಿ ನಿಗಮಕ್ಕೆ ಸೂಕ್ತ ಅನುದಾನವನ್ನು ನೀಡುವಂತೆ ಹಾಗೂ ಕಾನೂನು ಬದ್ದವಾಗಿ ಕಟ್ಟಿರುವ ಕ್ರೈಸ್ತ ಧಾರ್ಮಿಕ ಕೇಂದ್ರಗಳು, ಚರ್ಚ್, ಮತ್ತು ಸಂಸ್ಥೆಗಳನ್ನು ರಕ್ಷಿಸುವಂತೆ ಮನವಿ ಮಾಡಿದರು. ಜೊತಗೆ ಧರ್ಮಗುರುಗಳು ಮತ್ತು ಕ್ರೈಸ್ತ ಸಂಸ್ಥೆಗಳ ಮೇಲೆ ದಾಳಿ ನಡೆಸುವವರ ವಿರುದ್ದ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಜರಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮುಂದಿನ ಬಜೆಟ್ ನಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ದಿಗಾಗಿ 1,000 ಕೋಟಿ ರುಪಾಯಿ ಅನುದಾನ, ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗುವಂತೆ ವ್ಯವಸ್ಥೆ ರೂಪಿಸಬೇಕು ಎಂದು ಮನವಿ ಮಾಡಿದರು.
ಕ್ರೈಸ್ತರಿಗೆ 3ಬಿ ಕ್ಯಾಟಗರಿಯಲ್ಲಿ ಪ್ರತ್ಯೇಕವಾಗಿ 5% ಮೀಸಲಾತಿ, ಸರಕಾರದ ನಿಗಮ, ಮಂಡಳಿಗಳಲ್ಲಿ ಕ್ರೈಸ್ತರಿಗೆ ಸೂಕ್ತ ಸ್ಥಾನಮಾನ, ಮೇಲ್ಮನೆಯಲ್ಲಿ ಕ್ರೈಸ್ತ ಸಮುದಾಯದ ನಾಯಕರಿಗೆ ಎಂಎಲ್ಸಿ ಮಾಡುವ ಮೂಲಕ ಸ್ಥಾನಮಾನ, ಹಾಗೂ ಬೆಂಗಳೂರಿನಲ್ಲಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕ್ರೈಸ್ತ ಭವನ ನಿರ್ಮಾಣಕ್ಕೆ ಅನುದಾನ ಮತ್ತು ಜಾಗವನ್ನು ಹಂಚಿಕೆ ಮಾಡುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗಳಾದ ಗೋವಿಂದರಾಜು, ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಂ ಅಂಥೋನಿ ವಿಕ್ರಂ, ಡಾ.ಮನೋಹರ್ ಚಂದ್ರಪ್ರಸಾದ್, ಧರ್ಮಗುರುಗಳಾದ ಫಾದರ್ ಮಹಿಮಾದಾಸ್, ವಕೀಲರಾದ ಜಾನ್ ಪೀಟರ್, ಮನೋರಂಜಿನಿ, ವೆಂಕಟೇಶ್, ಜೋಸಫ್ ಮಹದೇವ್ ಸೇರಿದಂತೆ ಪ್ರಮುಖರಿದ್ದರು.