ಬೆಂಗಳೂರು, ಜು 02 (DaijiworldNews/SM): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜ್ಯದ ಮಟ್ಟಿಗೆ ಸಾರ್ವಕಾಲಿಕ ದಾಖಲೆಯ 14ನೇ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನದ ಮುಂದುವರೆದ ಭಾಗವಾಗಿ ಜು.3ರಂದು ಅಧಿವೇಶನ ಶುರುವಾಗಲಿದ್ದು, 10 ದಿನಗಳ ಅಧಿವೇಶನದಲ್ಲಿ ಮೊದಲ ದಿನವಾದ ಸೋಮವಾರ ಮಧ್ಯಾಹ್ನ 12 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ.
ಬಳಿಕ ಜು.4ರಿಂದ ಸರ್ಕಾರಿ ಕಾರ್ಯಕಲಾಪಗಳು ಪ್ರಾರಂಭವಾಗಲಿದ್ದು, ಮೊದಲ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ.
ಸಿದ್ದು ದಾಖಲೆಯ ಬಜೆಟ್:
ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ 13 ಬಜೆಟ್ಗಳ ಮಂಡನೆಯ ಸಾಧನೆಯನ್ನು 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಗಟ್ಟಿದ್ದರು. ಇದೀಗ ಎರಡನೇ ಅವಧಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಜು.7ರಂದು ಬಜೆಟ್ ಮಂಡಿಸಲಿದ್ದು, ತನ್ಮೂಲಕ ರಾಜ್ಯದ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿಗೆ ಭಾಜನರಾಗಲಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ ದಾಖಲೆಯ 3.35 ಲಕ್ಷ ಕೋಟಿಗೆ ಹೆಚ್ಚಾಗುವ ನಿರೀಕ್ಷೆಯಿದ್ದು, ಬಜೆಟ್ ಮೇಲಿನ ಸಾಮಾನ್ಯ ಚರ್ಚೆ ಬಳಿಕ ಅನುದಾನದ ಬೇಡಿಕೆಗಳನ್ನು ಅಂಗೀಕರಿಸಲಾಗುತ್ತದೆ.
ಗ್ಯಾರಂಟಿ ಕಲಹ ಖಚಿತ:
10 ದಿನಗಳ ಕಲಾಪದಲ್ಲಿ 8 ದಿನ ಇತರೆ ಕಲಾಪಗಳಿಗೂ ಅವಕಾಶ ನೀಡಲಾಗಿದೆ. ಈ ವೇಳೆ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಯ ಅನುಷ್ಠಾನ ಮಾಡಿರುವ ಪರಿ ಬಗ್ಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ. ಹೆಚ್ಚುವರಿ ಅಕ್ಕಿ ಭರವಸೆ ನೀಡಿ ಹಣ ನೀಡುತ್ತಿರುವ ಬಗ್ಗೆ ಸರ್ಕಾರದ ವಿರುದ್ಧ ಮುಗಿ ಬೀಳುವ ಸಾಧ್ಯತೆಯಿದ್ದು, ರಾಜ್ಯ ಸರ್ಕಾರ ಹಣ ನೀಡಿದರೂ ಅಕ್ಕಿ ನೀಡದ ಕೇಂದ್ರ ಹಾಗೂ ಬಿಜೆಪಿಯವರ ನಿಲುವನ್ನು ಪ್ರಸ್ತಾಪಿಸಿ ಸರ್ಕಾರ ಹಾಗೂ ಕಾಂಗ್ರೆಸ್ ಸದಸ್ಯರು ಪ್ರತಿದಾಳಿ ನಡೆಸುವ ಸಾಧ್ಯತೆಯಿದೆ.