ಬೆಂಗಳೂರು ಜು, 3 (DaijiworldNews/AK): ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವೈಎಸ್ಟಿ ತೆರಿಗೆ ಸರ್ಕಾರ ಎಂಬ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆರೋಪಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಧ್ವನಿಗೂಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪೇ ಸಿಎಂ, ಪೇ ಸೋನಿಯಾ, ಪೇ ವೇಣುಗೋಪಾಲ್ ಎಲ್ಲವೂ ಇದೆ. 10 ಜನರ ಮುಖ್ಯಮಂತ್ರಿಗಳು ಯಾರ್ಯಾರು ಎಂದು ನನಗೆ ಗೊತ್ತಿಲ್ಲ.ಕುಮಾರಸ್ವಾಮಿಗೆ ಅವರಿಗೆ ಮಾಹಿತಿ ಮೂಲಗಳಿವೆ. ಅವರಿಗೆ ಮೊದಲು ಕ್ಯಾಬಿನೆಟ್ ಅಜೆಂಡಾ ಹೋಗುತ್ತದೆ ಎಂದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ಪುತ್ರನೂ ಆಗಿರುವ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ವೈಎಸ್ಟಿ ತೆರಿಗೆ ಅಂತ ಅವರ ಸರ್ಕಾರದಲ್ಲಿ ಬಂದಿದೆಯಂತೆ. ಅದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹೇಳಿದರು.
ವಿಧಾನಸಭೆ ಮತ್ತು ಪರಿಷತ್ ವಿಪಕ್ಷ ನಾಯಕರ ಆಯ್ಕೆ ಕುರಿತು ಮಾತನಾಡಿದ ಯತ್ನಾಳ್, ವಿಪಕ್ಷ ನಾಯಕ ಯಾರೇ ಆದರೂ ಸ್ವಾಗತ ಮಾಡುತ್ತೇವೆ. ನಾನು ರೇಸ್ನಲ್ಲಿ ಇದ್ದೇನೆ ಎಂದು ನೀವೇ ತೋರಿಸಿದ್ದೀರಿ. ಮತ್ತೆ ನಮ್ಮ ಮಧ್ಯೆ ಬೆಂಕಿ ಹಚ್ಚಬೇಡಿ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಬದ್ಧ ಎಂದರು.
ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಯತ್ನಾಳ್ ಮತ್ತೊಂದು ಗಂಭೀರ ಆರೋಪ ಮಾಡಿದರು. ಶಾಸಕರ ಶಿಫಾರಸು ತಂದರೆ ಸಾಲದು 30 ಲಕ್ಷ ದುಡ್ಡು ತನ್ನಿ ಎಂದು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಬೇಡಿಕೆ ಇಡುತ್ತಾರೆ ಎಂದು ದೂರಿದರು.