ಮೈಸೂರು ಜು 5 (DaijiworldNews/Ak): ಸಣ್ಣ ಸರ್ಕಾರಿ ಸ್ಥಾನಮಾನ ನೀಡಿದರೂ ನಿಭಾಯಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ಧರಾಮಯ್ಯ ಹೇಳಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿಯಂತೆ ಸಣ್ಣ ಹುದ್ದೆ ನೀಡಿದರು ನಿಭಾಯಿಸುತ್ತೇನೆ. ತಂದೆಯವರು ಸಿಎಂ ಆಗಿರುವ ಕಾರಣ ಕ್ಷೇತ್ರದ ಜನರಿಗೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಅವರನ್ನ ನೋಡಲು ಬರುವ ರಾಜ್ಯದ ಜನರನ್ನೆಲ್ಲಾ ಭೇಟಿಯಾಗಬೇಕು. ಆದ್ದರಿಂದ ವರುಣ ಕ್ಷೇತ್ರದ ಮತದಾರರಿಗೆ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಜನರ ಸಮಸ್ಯೆಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಅಧಿಕಾರಿಗಳಿಗೆ ಹೇಳಿ ಜನರ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಲು ಸರ್ಕಾರಿ ಸ್ಥಾನಮಾನ ಇರಬೇಕು. ನನಗೆ ಯಾವುದಾದರು ಚಿಕ್ಕದಾದ ಸ್ಥಾನಮಾನ ನೀಡಿದರು ಸಹಕಾರಿ ಆಗುತ್ತದೆ ಎಂದರು.
ಕಳೆದ ಬಾರಿ ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದರು. ಅದು ದೊಡ್ಡ ಹುದ್ದೆಯಲ್ಲ. ಆದರೂ ಅಂತಹದೇ ಸಣ್ಣ ಹುದ್ದೆ ನೀಡಿದರೂ ಜನರ ಸೇವೆ ಮಾಡಲು ನಾನು ಸಿದ್ಧ ಎಂದು ಸರ್ಕಾರಿ ಸ್ಥಾನಮಾನದ ಮೇಲೆ ಯತೀಂದ್ರ ಸಿದ್ದರಾಮಯ್ಯ ಆಸೆ ಹೊರಹಾಕಿದರು.
ಇನ್ನು ಲೋಕಸಭೆಗೆ ಸಿಎಂ ಪುತ್ರ ಡಾ ಯತೀಂದ್ರ ಸ್ಪರ್ಧೆ ಮಾಡಬೇಕೆನ್ನುವ ಬೆಂಬಲಿಗರ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಸೂಚಿಸಿದರೆ ಆದೇಶ ಪಾಲಿಸಲು ರೆಡಿ ಎಂದರು. ಚುನಾವಣೆಗೆ ಇನ್ನು 8 ತಿಂಗಳ ಕಾಲಾವಕಾಶ ಇದೆ. ಚುನಾವಣೆ ಸಂದರ್ಭದಲ್ಲಿ ಯಾರು ಸೂಕ್ತ ಅಭ್ಯರ್ಥಿ ಎಂದು ಗೊತ್ತಾಗಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು. ಒಂದು ವೇಳೆ ನಾನು ಸ್ಪರ್ಧೆ ಮಾಡಬೇಕು ಎಂದು ಪಕ್ಷ ಸೂಚನೆ ನೀಡಿದರೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುವೇ ಎಂದರು.