ಬೆಂಗಳೂರು, ಜು 6 (DaijiworldNews/MS): ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ತಮ್ಮ ದಾಖಲೆಯ 14ನೇ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ.
ರಾಜಧಾನಿ ಬೆಂಗಳೂರಿಗರು ಸೇರಿದಂತೆ ಕರ್ನಾಟಕದ ಜನರು ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನಾಳಿನ ಬಜೆಟ್ ನಲ್ಲಿ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳ ಕುರಿತಂತೆ ಬಜೆಟ್ನಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ. ಅಲ್ಲದೆ ಉಚಿತ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣದ ಬಗ್ಗೆಯೂ ಪ್ರಸ್ತಾಪ ಮಾಡಲಿದ್ದಾರೆ.
ಕಾಂಗ್ರೆಸ್ ಸರ್ಕಾರ ಜನತೆಗೆ ನೀಡಿರುವ ಆಶ್ವಾಸನೆಗಳನ್ನು ಜಾರಿಗೆ ತರಲು ವರ್ಷಕ್ಕೆ 59 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕಾಗುತ್ತದೆ. ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಸರ್ಕಾರ ಹೇಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸುತ್ತದೆ, ಹೆಚ್ಚುವರಿ ಅನುದಾನವನ್ನು ಯಾವ ರೀತಿ ಬಿಡುಗಡೆ ಮಾಡುತ್ತದೆ ಎಂಬುದೇ ಎಲ್ಲರ ಕುತೂಹಲ.
ಇನ್ನು ಬಜೆಟ್ ಗಾತ್ರವನ್ನು ಕೂಡ 3.25 ಲಕ್ಷ ಕೋಟಿ ರೂ.ಗಳಿಗೆ ಏರಿಕೆ ಮಾಡುವುದಾಗಿ ಈಗಾಗಲೇ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಆಗಿ ಸಿದ್ದು ಅವರು ಮಂಡಿಸುತ್ತಿರುವ 7ನೇ ಬಜೆಟ್ ಇದಾಗಲಿದೆ.