ಬೆಂಗಳೂರು,ಜು 7 (DaijiworldNews/MS): ಅರ್ಥಿಕ ಸಚಿವರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು 14ನೇ ಸಲ ರಾಜ್ಯದ ಬಜೆಟ್ ಅನ್ನು ಮಂಡಿಸುವ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುತ್ತಿದ್ದಾರೆ.
ಏಕೆಂದರೆ ಇಲ್ಲಿವರೆಗೆ ಅತಿಹೆಚ್ಚು ಬಜೆಟ್ ಮಂಡಿಸಿದ ದಾಖಲೆಯನ್ನು ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸಿದ್ದರಾಮಯ್ಯನವರು ಸರಿಗಟ್ಟಿದ್ದರು. ಆದರೆ, ಇಂದು ಸಿದ್ದರಾಮಯ್ಯನವರು ಇಂದು ೧೪ನೇ ಬಜೆಟ್ ಮಂಡಿಸುವ ಮೂಲಕ ಹೆಗಡೆಯವರ ದಾಖಲೆಯನ್ನು ಮುರಿದು ಕರ್ನಾಟಕದ ಆಡಳಿತ ವ್ಯವಸ್ಥೆಯಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಯಾಗಲಿದ್ದು, ಬಳಿಕ ರಾಜ್ಯದಲ್ಲಿ ಅತೀ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯ ಅವರ ಹೆಗಲೇರಲಿದೆ.
ಐತಿಹಾಸಿಕ ಸಾಧನೆ ಜೊತೆಗೆ ಸಾಲ ಸುಳಿಗೆ ಸಿಲುಗಿ ಅಧೋಗತಿಯತ್ತ ಸಾಗಿರುವ ರಾಜ್ಯದ ಆರ್ಥಿಕ ಸ್ಥಿತಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಪನ್ಮೂಲಗಳ ಕ್ರೋಢೀಕರಣದಂತಹ ಸಾಲು ಸಾಲು ಸವಾಲುಗಳನ್ನು ಹೇಗೆ ನಿರ್ವಹಿಸಲಿದ್ದಾರೆಂಬುದರ ಕುರಿತು ಕುತೂಹಲಗಳು ಹುಟ್ಟಿಕೊಂಡಿವೆ.