ಬೆಂಗಳೂರು, ಜು 07 (DaijiworldNews/HR): ರಾಜಕೀಯದಲ್ಲಿ ಯಾವ ಸ್ಥಾನಮಾನಗಳೂ ಶಾಶ್ವತವಲ್ಲ, ಹಾಗಾಗಿ ಏನು ಬೇಕಾದರೂ ಆಗಬಹುದು. ರಾಜಕೀಯ ಒಂದು ಉತ್ತಮ ಕಲೆಯಷ್ಟೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಗೂ ರಾಜಕಾರಣದಲ್ಲಿ ಏಳು ಬೀಳು ಸಾಮಾನ್ಯ. ಇಲ್ಲಿ ಶತ್ರುವಿನ ಶತ್ರು ಮಿತ್ರನಾಗಿರುತ್ತಾನೆ. ಚುನಾವಣೆಯವರೆಗೆ ಒಂದಿರುತ್ತದೆ, ಆ ಮೇಲೆ ಮುಂದೆನಾಗುತ್ತದೆಯೋ ಗೊತ್ತಿಲ್ಲ ಎಂದರು.
ಕೂಡಲೇ ಮಧ್ಯ ಪ್ರವೇಶಿಸಿದ ಬಸವರಾಜ ಬೊಮ್ಮಾಯಿ, ಮೊದಲು ರಾಜಕಾರಣದಲ್ಲಿ ಕಾದು ನೋಡಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈಗಿನ ರಾಜಕಾರಣದಲ್ಲಿ ಅಂತಹ ವಾತಾವರಣ ಉಳಿದಿಲ್ಲ. ಈಗ ಅವಕಾಶ ಸಿಕ್ಕಾಗ ಯಾವ ರೀತಿಯಿಂದಲಾದರೂ ಸರಿ ಅಧಿಕಾರ ಪಡೆದುಕೊಳ್ಳುವ ಘಟನೆಗಳು ನಮ್ಮ ಅಕ್ಕಪಕ್ಕದ ರಾಜ್ಯದಲ್ಲಿ ನಡೆದಿವೆ ಎಂದಿದ್ದಾರೆ.
ಇನ್ನು ಡಿಕೆಶಿ ಅವರು ಕೊಟ್ಟ ಕುದುರೆಯನ್ನು ಚೆನ್ನಾಗಿ ಏರುವ ಸಾಮಾರ್ಥ್ಯ ಹೊಂದಿದ್ದಾರೆ. ರಾಜಕಾರಣದಲ್ಲಿ ಯಾವುದು ಶಾಶ್ವತವಲ್ಲ. ಬರುವಂತಹ ದಿನಗಳಲ್ಲಿ ಬದಲಾವಣೆಗೆ ಉಪ ಸಭಾಧ್ಯಕ್ಷರು ಸಾಕ್ಷಿಯಾಗಬಹುದು ಎಂದರು.
ಇದಕ್ಕೆ ಉತ್ತರಿಸದ ಡಿಕೆಶಿ, ನಾನು ಇನ್ನೊಮ್ಮೆ ರಾಜಕಾರಣವನ್ನು ಮಾತನಾಡುತ್ತೇನೆ. ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಭಾಗಿಯಾಗಬೇಕಿದೆ ಎಂದರು.