ಬೆಂಗಳೂರು, ಜು 7 (DaijiworldNews/MS): ನಾನು ಕೋಟಾ ಶ್ರೀನಿವಾಸ್ ಪೂಜಾರಿ ಅವರ ಅಪ್ಪಟ ಅಭಿಮಾನಿ ಅವರೊಬ್ಬ ಪ್ರಾಮಾಣಿಕ ಶುದ್ದ ಹಸ್ತ ರಾಜಕಾರಣಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗುರುವಾರ ವಿಧಾನ ಪರಿಷತ್ ಕಲಾಪದಲ್ಲಿ ಗುಣಗಾನ ಮಾಡಿದ್ದಾರೆ.
ಸರ್ಕಾರದ ಪಂಚ ಗ್ಯಾರಂಟಿಗಳ ಕುರಿತು ಚರ್ಚಿಸಲು ನಿಲುವಳಿ ಸೂಚನೆಗೆ ಅವಕಾಶ ಕೊಡುವಂತೆ ಕೋಟ ಶ್ರೀನಿವಾಸ್ ಪೂಜಾರಿ ವಿಷಯ ಮಂಡಿಸಿ, ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರಲು ವಿಫಲವಾಗಿದೆ ಎಂದಾಗ ಡಿಕೆ ಶಿವಕುಮಾರ್ ಪೂಜಾರಿಯವರ ಪರ ಮಾತನಾಡಿದರು.
ಪರಿಷತ್ ಹಿರಿಯರ ಮನೆಯಾಗಿದ್ದು, 33 ವರ್ಷವಾಗಿದೆ. ಇಲ್ಲಿಗೆ ಬಂದು ಇದರ ಘನತೆಯನ್ನು ರಕ್ಷಿಸಬೇಕು. ನಮ್ಮ ಪಂಚ ಗ್ಯಾರಂಟಿಗಳನ್ನ ಮನಸಾರೆ ಒಪ್ಪಿಕೊಂಡಿದ್ದೀರಿ ಧನ್ಯವಾದಗಳು. ನಾನು ಸಮಾಧಾನದಿಂದ ನಿಮ್ಮ ಮಾತನ್ನು ಕೇಳಿದ್ದೇನೆ. ಈ ಹಿಂದಿನ ಸರ್ಕಾರದ ಎಲ್ಲಾ ಆಚಾರ- ವಿಚಾರಗಳನ್ನ ನಾವು ಪ್ರಚಾರ ಮಾಡಿದ್ದೆವು, ಅದರ ಬಗ್ಗೆ ಮಾತನಾಡುವ ಸಂದರ್ಭವಲ್ಲ. ನಮ್ಮ ಪಂಚ ಗ್ಯಾರಂಟಿಗಳನ್ನ ರಾಜ್ಗಪಾಲರ ಭಾಷಣದ ಮೂಲಕ ನೀವುಗಳು ತಿಳಿದುಕೊಳ್ಳಬಹುದು. ಬೇರೆ ಚರ್ಚೆಗೆ ಸಂದರ್ಭವಲ್ಲ. ನಾವು ನೀವು ಯಾವುದೇ ಸಲಹೆ- ಸೂಚನೆಗಳನ್ನು ಕೊಟ್ಟರು ನಾವು ಸ್ವೀಕರಿಸುತ್ತೇವೆ. ಈಗ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗೆ ಅವಕಾಶವಿದೆ, ಅದರ ಮೇಲೆ ಮೊದಲು ಚರ್ಚೆಯಾಗಲಿ ಎಂದರು.