ಉತ್ತರಾಖಂಡ, ಜು 07 (DaijiworldNews/AK): ಪಿಥೋರ್ಗಢದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಭೂಕುಸಿತ ಉಂಟಾಗಿದ್ದು ಗ್ರಾಮದಲ್ಲಿ 200ಕ್ಕೂ ಅಧಿಕ ಮಂದಿ ಸಿಲುಕಿದ್ದಾರೆ.
ಉತ್ತರಾಖಂಡದ ಧಾರ್ಚುಲಾದಲ್ಲಿ ದರ್ಮಾ ಕಣಿವೆಯ ಚಾಲ್ ಗ್ರಾಮದಲ್ಲಿ ಮೇಘಸ್ಫೋಟದಿಂದಾಗಿ ಪಾದಚಾರಿ ಸೇತುವೆ ಮತ್ತು ಟ್ರಾಲಿ ನಾಶವಾಗಿದೆ. ಗ್ರಾಮದಲ್ಲಿ 200ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದಾರೆ. ಎಸ್ಡಿಆರ್ಎಫ್ ಮತ್ತು ಪೊಲೀಸ್ ಆಡಳಿತವು ಸ್ಥಳಕ್ಕೆ ತೆರಳಿದೆ, ಆದರೆ ದೋಬಾತ್ನಲ್ಲಿ ರಸ್ತೆಯನ್ನು ಮುಚ್ಚಿರುವುದರಿಂದ, ರಕ್ಷಣೆಗೆ ತೆರಳುತ್ತಿರುವ ಪೊಲೀಸ್ ಆಡಳಿತ ಮತ್ತು ಎಸ್ಡಿಆರ್ಎಫ್ ತಂಡವೂ ಸಂಕಷ್ಟಕ್ಕೆ ಸಿಲುಕಿದೆ.
ಬದರಿನಾಥದಲ್ಲಿ ಇಂದು ಮತ್ತೆ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಚೀಂಕಾ ಬಳಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದ್ದು, ಹಲವು ಪ್ರಯಾಣಿಕರು ಪರದಾಡುವಂತಾಗಿದೆ.
ಮುಂದಿನ ದಿನಗಳಲ್ಲಿ ದೇಶದ ಏಳು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಈ ಬಾರಿಯು ಮಳೆಯಿಂದ ಹೆಚ್ಚಿನ ತೊಂದರೆಯನ್ನು ಅನುಭವಿಸಬೇಕಾಗಬಹದು ಎಂದು ಉಳಿಸಲಾಗಿದೆ.
ಉತ್ತರಾಖಂಡದಲ್ಲಿ ಮುಂಗಾರು ಆರಂಭದಿಂದಲೇ ಧಾರಾಕಾರ ಮಳೆಯಾಗುತ್ತಿದೆ. ರಾಜ್ಯಾದ್ಯಂತ ಗುಡ್ಡಗಾಡು ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಭೂಕುಸಿತಗಳು ಭಾರಿ ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ರಸ್ತೆಗೆ ಅಪಾರ ಪ್ರಮಾಣದ ಅವಶೇಷಗಳು, ಕಲ್ಲುಗಳು ಬಿದ್ದಿದ್ದು, ರಸ್ತೆ ಸಂಪೂರ್ಣ ಬಂದ್ ಆಗಿದೆ. ಹಿಮಾಚಲ ಪ್ರದೇಶದಿಂದ ರಾಜಸ್ಥಾನ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಕೇರಳ, ಉತ್ತರಾಖಂಡದವರೆಗೆ ಮುಂಬರುವ ಗಂಟೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ದೆಹಲಿ-ಎನ್ಸಿಆರ್ನಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಕೇರಳ, ಕರ್ನಾಟಕದಲ್ಲೂ ಭಾರಿ ಮಳೆಯಾಗುತ್ತಿದೆ.