ಚಿಕ್ಕೋಡಿ ಜು 8 (DaijiworldNews/Ak):ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಮೃತದೇಹದ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
ಸುಮಾರು 15 ವರ್ಷಗಳಿಂದ ಹಿರೇಕೋಡಿಯ ನಂದಿ ಪರ್ವತದಲ್ಲಿ ನೆಲೆಸಿರುವ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಹಣದ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಸ್ವಾಮೀಜಿಗಳು ನೀಡಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಕಿರಾತಕರು ಹತ್ಯೆ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಇಬ್ಬರನ್ನು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಶವ ಹುಡುಕಾಟಕ್ಕೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಹತ್ಯೆ ಮಾಡಿ ಶವವನ್ನು ಎಲ್ಲಿ ಹಾಕಿದ್ದಾರೆ ಸ್ಪಷ್ಟವಾಗಿ ತಿಳಿಸದೆ ಪೊಲೀಸರನ್ನು ಗೊಂದಲಕ್ಕೀಡು ಮಾಡಿದರು.
ಕಟಕಬಾವಿ ಗ್ರಾಮದ ತೆರೆದ ಕೊಳವೆ ಬಾವಿ ಬಳಿ ಎಸೆದಿದ್ದೇವೆ ಎಂದರೆ ಮತ್ತೊಂದು ಸಲ ಬಟ್ಟೆಯಲ್ಲಿ ಕಟ್ಟಿ ನದಿಗೆ ಎಸೆದಿದ್ದೇವೆ. ಹೀಗೆ ದ್ವಂದ್ವ ಹೇಳಿಕೆ ನೀಡಿ ಪೊಲೀಸರಿಗೆ ಗೊಂದಲ ಮೂಡಿಸಿದ್ದಾರೆ.
ಪೊಲೀಸರು ಕಟಕಬಾವಿ ಗ್ರಾಮದಲ್ಲಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮುನಿಗಳನ್ನು ಆಶ್ರಮದಿಂದಲೇ ಅಪಹರಿಸಿ ಕೊಲೆ ಮಾಡಿರುವ ಸಂಗತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಜೈನಮುನಿ ಶವ ಕಟಕಬಾವಿ ಕೊಳವೆ ಬಾವಿಯಲ್ಲಿ ಎಸೆಯಲಾಗಿದೆ ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಇನ್ನೊಂದೆಡೆ ಅಹಿತಕರ ಘಟನೆ ನಡೆಯದಂತೆ ಚಿಕ್ಕೋಡಿ ತಾಲೂಕು ಮತ್ತು ರಾಯಬಾಗ ತಾಲೂಕಿನಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.