ನವದೆಹಲಿ,ಜು 10 (DaijiworldNews/AK):ಇಸ್ರೋ ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಸ್ಎಸ್ಎಲ್ ವಿ) ರಾಕೆಟ್ ನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ.
ನಾವು ಎಸ್ಎಸ್ಎಲ್ವಿಯನ್ನು ಸಂಪೂರ್ಣವಾಗಿ ಖಾಸಗಿಗೆ ನೀಡುತ್ತಿದ್ದೇವೆ. ಕೇವಲ ಉತ್ಪಾದನೆ ಮಾತ್ರವಲ್ಲ. ಸಂಪೂರ್ಣ ತಂತ್ರಜ್ಞಾನವನ್ನು ನೀಡಲಿದ್ದೇವೆ ಎಂದು ಇಸ್ರೋದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೀಗಾಗಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅತಿ ಹೆಚ್ಚು ಬೆಲೆ ನೀಡುವ ಕಂಪನಿ ಈ ರಾಕೆಟ್ ಪಡೆದುಕೊಳ್ಳಲಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ನಡೆದಿದ್ದ ಎಸ್ಎಸ್ಎಲ್ವಿ ಮೊದಲ ಉಡಾವಣೆ ತಾಂತ್ರಿಕ ದೋಷದಿಂದ ವಿಫಲವಾಗಿತ್ತು. ನಂತರ ಇಸ್ರೋ , ರಾಕೆಟ್ನ ಲೋಪದೋಷವನ್ನು ಪತ್ತೆ ಹಚ್ಚಿ ಸರಿಪಡಿಸಲಾಗಿತ್ತು. ಆದಾದ ಬಳಿಕ ಫೆಬ್ರವರಿಯಲ್ಲಿ ನಡೆದ ಉಡಾವಣೆಯಲ್ಲಿ ಇಸ್ರೋದ ಇಒಎಸ್-07 ಮತ್ತು ಅಮೆರಿಕ ಮೂಲಕ ಅಂಟಾರಿಸ್ ಮತ್ತು ಚೆನ್ನೈ ಮೂಲದ ಸ್ಪೇಸ್ ಕಿಡ್ಸ್ ಅಜಾದಿಸ್ಯಾಟ್-2 ಉಪಗ್ರಹಗಳನ್ನು ಈ ರಾಕೆಟ್ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಎಸ್ಎಲ್ಎಲ್ವಿ ರಾಕೆಟ್ಗಳು 500 ಕೆ.ಜಿ. ತೂಕದ ಉಪಗ್ರಹಗಳನ್ನ ಕೆಳಹಂತದ ಕಕ್ಷೆಗೆ ತಲುಪಿಸುವ ಹಾಗೂ 10 ಕೆ.ಜಿ ನ್ಯಾನೋ ಮತ್ತು 100 ಕೆ.ಜಿ ತೂಕದ ಮೈಕ್ರೋ ಉಪಗ್ರಹಗಳನ್ನು ಮೇಲಿನ ಹಂತದ ಕಕ್ಷೆಗೆ ಉಡಾವಣೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.