ಬೆಂಗಳೂರು, ಜು 10 (DaijiworldNews/HR): ಅಡ್ವಾನ್ಸ್ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಹಾಗೂ ಎಂ.ಎನ್. ಕುಮಾರ್ ನಡುವಿನ ಗಲಾಟೆ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ 'ಹುಚ್ಚ' ಸಿನಿಮಾದ ನಿರ್ಮಾಪಕ ರೆಹಮಾನ್ ಕೂಡ ಸುದೀಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಹಮಾನ್, ಸುದೀಪ್ ವಿರುದ್ದ ಇದು ನನ್ನ ಆರೋಪ ಎನ್ನುವುದಿಲ್ಲ, ಸುದೀಪ್ ಬಳಿ ಇದು ನನ್ನ ಮನವಿ. ನಾನು ಇಲ್ಲಿಯವರೆಗೆ 20 ಸಿನಿಮಾ ಮಾಡಿದ್ದೇನೆ. ‘ಯಜಮಾನ’ ಮತ್ತು ‘ಹುಚ್ಚ’ದಂತಹ ಸಿನಿಮಾ ನಿರ್ಮಾಣ ಮಾಡಿದ್ದೇನೆ. ನ್ಯಾಯ ಕೇಳೋಕೆ ಸುದ್ದಿಗೋಷ್ಠಿ ಕರೆದಿದ್ದೇನೆ’ ಎಂದರು.
ಇನ್ನು 'ಹುಚ್ಚ' ಸಿನಿಮಾದ ಶಿವಮೊಗ್ಗ ಏರಿಯಾದ ವಿತರಣೆ ಸುದೀಪ್ ಅವರಿಗೆ ನಾಲ್ಕೂವರೆ ಲಕ್ಷ ರೂಪಾಯಿಗೆ ಕೊಟ್ಟೆ. ಸಿನಿಮಾ ರಿಲೀಸ್ ಆಗಿ 100 ದಿನ ಆಯ್ತು ಎಂದು ಸುದೀಪ್ ಅವರನ್ನು ಕರೆದು ಲಾಡು ಹಂಚಿದ್ದೆವು. ಬಳಿಕ ಸುದೀಪ್ ಬೆಳೆದರು. ಒಂದು ದಿನ ಸುದೀಪ್ ಅವರು ‘ಸ್ವರ್ಗ್’ ಸಿನಿಮಾನ ರಿಮೇಕ್ ಮಾಡೋಣ, ವಿಷ್ಣು ಅವರನ್ನು ಅತಿಥಿಪಾತ್ರದಲ್ಲಿ ಕರೆತರೋಣ ಎಂದರು. ಅವರು ಹೇಳಿದರು ಅಂತ ನಾನು ‘ಸ್ವರ್ಗ್’ ಚಿತ್ರದ ರಿಮೇಕ್ನ ಹತ್ತು ಲಕ್ಷ ರೂಪಾಯಿ ಕೊಟ್ಟ ತೆಗೆದುಕೊಂಡು ಬಂದೆ. ಈ ಸಿನಿಮಾ ಮಾಡೋಕೆ ವಿಷ್ಣುವರ್ಧನ್ ಅವರು ಹಿಂದೆಮುಂದೆ ನೋಡಿದರು. ನಾವು ಆ ಸಿನಿಮಾ ಕೈಬಿಟ್ಟೆವು. ‘ಅಂದಾಜ್ ಅಪ್ನಾ ಅಪ್ನಾ’ ಮಾಡೋಣ ಅಂದ್ರು. ಅದರ ಹಕ್ಕನ್ನು ತಂದೆ. ಅದು ಕೂಡ ಅರ್ಧಕ್ಕೆ ನಿಂತೋಯ್ತು’ ಎಂದರು.
‘ನಿರ್ಮಾಪಕರ ಸಂಘಕ್ಕೆ ಎಂಟು ವರ್ಷದ ಹಿಂದೆ ದೂರು ನೀಡಿದ್ದೆ. ಆದರೆ ಆ ಕೇಸ್ ಮುಚ್ಚೋಯ್ತು. ಸುದೀಪ್ಗೆ ನಾಲ್ಕುವರೆ ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದೆ. ಇದರ ಜೊತೆಗೆ ರಿಮೇಕ್ ರೈಟ್ಸ್ ದುಡ್ಡು 35 ಲಕ್ಷ ರೂಪಾಯಿ ವಾಪಸ್ ಕೊಡಬೇಕು ಎಂದು ದೂರಿನಲ್ಲಿ ತಿಳಿಸಿದ್ದೆ. ನನ್ನ ಹಣ ಹಿಂಪಡೆಯಲು ನಾನು ಸುದೀಪ್ ಮನೆ ಹತ್ರ ಹೋಗೋಕೆ ಶುರು ಮಾಡಿದೆ. ಆದರೆ ಅವ್ರು ಇಲ್ಲ ಅಂಥ ಹೇಳಿ ಕಳುಹಿಸುತ್ತಿದ್ದರು ಎಂದಿದ್ದಾರೆ.
ಇತ್ತೀಚೆಗೆ ನನ್ನ ಹಳೆಯ ಗೆಳೆಯ ಎಂಎನ್ ಕುಮಾರ್ ಸುದ್ದಿಗೋಷ್ಠಿ ಕರೆದಿದ್ದು ನೋಡಿದೆ. ನ್ಯಾಯ ಸಿಗಬಹುದು ಎಂದು ನಾನು ಕೂಡ ಮುಂದೆ ಬಂದೆ. ರಿಮೇಕ್ ಹಕ್ಕನ್ನು ತಂದಿದ್ದಕ್ಕೆ ಸಾಲ ಆಗಿದೆ. ಅದನ್ನು ಕೊಡಿ. ಸದ್ಯ ಮನೆ ಮಾರಿ ಬಾಡಿಗೆ ಮನೆಯಲ್ಲಿದ್ದೇನೆ ಎಂದಿದ್ದಾರೆ.