ಬೆಂಗಳೂರು, ಜು 10 (DaijiworldNews/AK) ಖ್ಯಾತ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್(83) ಅವರಿಗೆ ಹೃದಯಾಘಾತ ಸಂಭವಿಸಿದೆ. ಶ್ರೀಲಂಕಾಕ್ಕೆ ತೆರಳಿದ್ದ ಅವರು ಅಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತವಾಗಿತ್ತು. ಆದರೆ ಇದೀಗ ಅವರ ಆರೋಗ್ಯ ಸ್ಥಿತಿ ಸುಧಾರಣೆಗೊಂಡಿದೆ.
ಶ್ರೀಲಂಕಾದಲ್ಲಿರುವ ಅವರನ್ನು ಏರ್ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತರಲಾಗುತ್ತಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ. ಅಲ್ಲಿ ಖ್ಯಾತ ಹೃದಯತಜ್ಞ ಡಾ. ದೇವಿಶೆಟ್ಟಿ ಅವರು ಕಸ್ತೂರಿ ರಂಗನ್ ಅವರ ಆರೋಗ್ಯದ ಬಗ್ಗೆ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಕಸ್ತೂರಿ ರಂಗನ್ ಅವರು ಸುಮಾರು ಒಂದು ದಶಕದ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಭಾರತ ಸರ್ಕಾರದಿಂದ ನೀಡಲಾಗುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.