ಬೆಂಗಳೂರು, ಜು 10 (DaijiworldNews/HR): ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಸಂಬಳ ಜಾಸ್ತಿ ಮಾಡಬೇಕು. ಅವರಿಗೂ ಪಿಂಚಣಿ ಕೊಡಬೇಕು. ಹೊಸ ಸ್ಮಾರ್ಟ್ಫೋನ್ಗಳನ್ನ ನೀಡಬೇಕು ಎಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ನ ತಿಪ್ಪೇಸ್ವಾಮಿ ಆಗ್ರಹಿಸಿದ್ದು, ಇದಕ್ಕೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ರಾಜ್ಯ ಸರ್ಕಾರದಿಂದ ಈಗಾಗಲೇ 5 ಸಾವಿರ ಗೌರವ ಧನ ನೀಡಲಾಗ್ತಿದ್ದು, ಕೇಂದ್ರದಿಂದ 5-8 ಸಾವಿರ ಗೌರವ ಧನ ಸಿಗುತ್ತಿದೆ. ಒಟ್ಟಾರೆ 10-13 ಸಾವಿರ ಗೌರವ ಧನ ಸಿಗುತ್ತಿದೆ ಎಂದರು.
ಇನ್ನು ಸದ್ಯಕ್ಕೆ ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಸಾಧ್ಯವಿಲ್ಲ. ಜೊತೆಗೆ ಆಶಾ ಕಾರ್ಯಕರ್ತೆಯರಿಗೆ ಪಿಂಚಣಿ ವ್ಯವಸ್ಥೆ ಸಾಧ್ಯವಿಲ್ಲ. ಅವರು ಸರ್ಕಾರಿ ಉದ್ಯೋಗಿಗಳು ಆಗಿದ್ದರೆ ಸಿಗುತ್ತಿತ್ತು. ಆದ್ರೆ ನಿಯಮದ ಪ್ರಕಾರ ಅವರಿಗೆ ಪಿಂಚಣಿ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.