ಬೆಂಗಳೂರು, ಜು 10 (DaijiworldNews/HR): ನಾನೇನಾದರೂ ತಪ್ಪು ಮಾಡಿದ್ದರೆ, ನ್ಯಾಯಾಯಲದಲ್ಲೇ ಶಿರಬಾಗಿ ಒಪ್ಪಿಕೊಂಡು ದಂಡ ಕಟ್ಟುತ್ತೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಸಿನಿಮಾ ಮಾಡಲು ನಮ್ಮಿಂದ ಮುಂಗಡ ಹಣ ತೆಗೆದುಕೊಂಡು ಕಾಲ್ ಶೀಟ್ ನೀಡುತ್ತಿಲ್ಲ ಎಂದು ಕಿಚ್ಚ ಸುದೀಪ್ ವಿರುದ್ದ ನಿರ್ಮಾಪಕ ಎನ್.ಎಮ್. ಕುಮಾರ್ ಆರೋಪ ಮಾಡಿದ್ದರು.
ಈ ಆರೋಪಕ್ಕೆ ಸುದೀಪ್ ಕಾನೂನು ಮೂಲಕವೇ ಉತ್ತರಿಸಿದ್ದು, ತಮ್ಮ ಮೇಲೆ ಸುಖಾಸುಮ್ಮನೆ ಆರೋಪ ಮಾಡಿ, ತಮ್ಮ ವ್ಯಕ್ತಿತ್ವಕ್ಕೆ ಕುಮಾರ್ ಧಕ್ಕೆ ತರುತ್ತಿದ್ದಾರೆ ಎಂದು ಮಾನನಷ್ಟ ನೋಟಿಸ್ ಕಳುಹಿಸಿದ್ದರು. ಬರೋಬ್ಬರಿ 10 ಕೋಟಿ ರೂಪಾಯಿ ಮಾನನಷ್ಟ ಕಟ್ಟಿಕೊಡಬೇಕು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಿದ್ದರು.
ಇನ್ನು ನೋಟಿಸ್ ಕಳುಹಿಸುತ್ತಿದ್ದಂತೆಯೇ ಕುಮಾರ್ ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಸುದೀಪ್ ತಮಗೆ ಮೋಸ ಮಾಡಿದ್ದು ನಿಜ ಎಂದು ನಿರ್ಮಾಪಕ ಎನ್.ಎಮ್. ಕುಮಾರ್ ಮತ್ತೆ ಆರೋಪಿಸಿದ್ದರು.
ಸುದೀಪ್, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಕ್ಕೆ ಪತ್ರ ಬರೆದಿದ್ದು, ನ್ಯಾಯಾಲಯದಲ್ಲೇ ಇದನ್ನು ಬಗೆಹರಿಸಿಕೊಳ್ಳಲು ಬಿಡಿ. ನಾನೇನಾದರೂ ತಪ್ಪು ಮಾಡಿದ್ದರೆ, ನ್ಯಾಯಾಯಲದಲ್ಲೇ ಶಿರಬಾಗಿ ಒಪ್ಪಿಕೊಂಡು ದಂಡ ಕಟ್ಟುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.