ಬೆಂಗಳೂರು, ಜು 10 (DaijiworldNews/SM): ರಾಜ್ಯ ಸರಕಾರ ಒಂದೆಡೆ ಗ್ಯಾರಂಟಿಗಳನ್ನು ಜಾರಿಗೆ ತರುವಲ್ಲಿ ಸಕ್ರೀಯವಾಗಿದ್ದರೆ, ಇತ್ತ ಶಾಲಾ ಮಕ್ಕಳಿಗೆ ಅಗತ್ಯವೆನಿಸಿದ ಸಮವಸ್ತ್ರ ವಿತರಣಾ ಕಾರ್ಯವನ್ನು ಕೂಡ ಚುರುಕುಗೊಳಿಸಿದೆ. ಈಗಾಗಲೇ ಶೇ. 80ರಷ್ಟು ಸಮವಸ್ತ್ರ ವಿತರಣಾ ಕಾರ್ಯ ಪೂರ್ಣಗೊಂಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಇದಕ್ಕಾಗಿ 125 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಸೋಮವಾರ ವಿಧಾನ ಪರಿಷತ್ತಿನಲ್ಲಿ ಮಂಜುನಾಥ್ ಭಂಡಾರಿ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು. ಸದ್ಯ ಬಾಕಿ ಉಳಿದ ಶೇ.17ರಷ್ಟು ಸಮವಸ್ತ್ರ ಮತ್ತು ಶೂ, ಸಾಕ್ಸ್ ಗಳನ್ನು ಈ ತಿಂಗಳಾಂತ್ಯದೊಳಗೆ ಪೂರೈಕೆ ಮಾಡಲಾಗುವುದು. ವಿದ್ಯಾ ವಿಕಾಸ ಯೋಜನೆಯಡಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮುದ್ರಿಸಿ ಶಾಲೆಗಳಿಗೆ ಸರಬರಾಜು ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿರುವ 13 ಸಾವಿರ ಶಿಕ್ಷಕರ ಜತೆಗೆ ಸಂಗೀತ, ಚಿತ್ರಕಲೆ ಸೇರಿದಂತೆ ವಿಶೇಷ ಶಿಕ್ಷಕರ ನೇಮಕಕ್ಕೂ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಹಣಕಾಸು ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.