ಉತ್ತರಾಖಂಡ, ಜು 11 (DaijiworldNews/AK): ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದ ವೇಳೆ ಗುಡ್ಡದಿಂದ ಬೃಹತ್ ಬಂಡೆ ಉರುಳಿ ಕಾರು ಜಖಂಗೊಂಡು ನಾಲ್ವರು ಸಾವನ್ನಪ್ಪಿದ್ದ ಘಟನೆ ನಡೆದಿದೆ. ಅಪಘಾತದಲ್ಲಿ ಇತರ ಆರು ಮಂದಿ ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ ಯಾತ್ರಾರ್ಥಿಗಳು ಗಂಗೋತ್ರಿಯಿಂದ ಉತ್ತರಕಾಶಿ ಜಿಲ್ಲೆಯ ಸುನಗರ ಪ್ರದೇಶದ ಬಳಿ ಹಿಂದಿರುಗುತ್ತಿದ್ದಾಗ ಅಪಘಾತ ನಡೆದಿದೆ. ಸ್ಥಳೀಯರ ಸಹಾಯದಿಂದ ತಡರಾತ್ರಿ ಹಲವು ಪ್ರಯಾಣಿಕರನ್ನು ರಕ್ಷಿಸಲಾಯಿತು. ನಿರಂತರವಾಗಿ ಬೀಳುತ್ತಿದ್ದ ಬಂಡೆಗಳಿಂದಾಗಿ ರಕ್ಷಣಾ ಕಾರ್ಯಾಚರಣೆ ಕೂಡ ಸ್ಥಗಿತಗೊಲಿಸಲಾಗಿದೆ. ಮೂರು ವಾಹನಗಳು ಅವಶೇಷಗಳಡಿ ಸಿಲುಕಿವೆ ಎಂದು ವಿಪತ್ತು ಸ್ವಯಂಸೇವಕ ರಾಜೇಶ್ ಕುಮಾರ್ ಹೇಳಿದ್ದಾರೆ.
ಭಾರೀ ಮಳೆಯಿಂದಾಗಿ ಬಂದರಕೋಟ್ ಬಳಿ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಮಳೆ ಮುಂದುವರಿದಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಧಾರಾಕಾರ ಸುರಿಯುವ ಮಳೆಯಿಂದ ಡೆಹ್ರಾಡೂನ್, ತೆಹ್ರಿ, ಚಮೋಲಿ, ಪೌರಿ, ಬಾಗೇಶ್ವರ್, ನೈನಿತಾಲ್, ಅಲ್ಮೋರಾ ಮತ್ತು ರುದ್ರಪ್ರಯಾಗದಲ್ಲಿ ಶಾಲೆಗಳಿಗೆ ರಜೆ ಘೋಷಿಸಲು ಆದೇಶಿಸಲಾಗಿದೆ.