ಬೆಂಗಳೂರು, ಜು 11 (DaijiworldNews/Ak): ಮಾನವ-ವನ್ಯಜೀವಿ ಸಂಘರ್ಷ ತಡೆಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ವಿಭಾಗೀಯ ಪೀಠ ಸರಕಾರಕ್ಕೆ ನಿರ್ದೇಶನ ನೀಡಿದ.
ಆನೆಗಳ ಸಂಚಾರಕ್ಕೆ ಸುರಕ್ಷಿತ ಕಾರಿಡಾರ್ ನಿರ್ಮಿಸಬೇಕು. ವನ್ಯಜೀವಿಗಳಿಂದ ಗಾಯಗೊಂಡವರ ನೆರವಿಗೆ ಕಂಟ್ರೋಲ್ ರೂಮ್ , ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ರವಾನಿಸಬೇಕು ಎಂದು ಹೇಳಿದೆ. ಸ್ಥಳೀಯರಿಂದ 24 ಗಂಟೆಗಳ ಕಾಲ ಮಾಹಿತಿ ಸ್ವೀಕರಿಸಲು ಕೇಂದ್ರ ಸ್ಥಾಪಿಸಬೇಕು.
ಅಲ್ಲದೇ ಕಾಡು ಪ್ರಾಣಿ ದಾಳಿಯಿಂದ ಗಾಯಗೊಂಡವರಿಗೆ ಚಿಕಿತ್ಸೆ ಒದಗಿಸಲು ಜಿಲ್ಲಾ ಆಸ್ಪತ್ರೆ ಕ್ರಮಕೈಗೊಳ್ಳಬೇಕು. ಜನರ ಅಹವಾಲು ಸ್ವೀಕರಿಸಲು ಪರಿಹಾರ ಘಟಕ ಸ್ಥಾಪಿಸಬೇಕು. ಅರಣ್ಯ ಇಲಾಖೆಗೆ ಅಗತ್ಯ ಮಾನವ ಸಂಪನ್ಮೂಲ, ವಾಹನ ಒದಗಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಒಂದು ವರ್ಷದಲ್ಲಿ ಕನಿಷ್ಠ 4 ಬಾರಿಯಾದರು ಅರಣ್ಯ ಪಡೆ ಮುಖ್ಯಸ್ಥರು, ವನ್ಯಜೀವಿ ಪರಿಪಾಲಕರು ಜೊತೆಯಾಗಿ ಸಭೆ ನಡೆಸಬೇಕು. ಅಲ್ಲದೇ ತಾಲೂಕು ಮಟ್ಟದಲ್ಲಿ ದೂರುಕೋಶ ಸ್ಥಾಪಿಸಿ ಮಾಹಿತಿ ಪಡೆಯಬೇಕು. ವಲಯ ಅರಣ್ಯ ಅಧಿಕಾರಿ, ತಹಶೀಲ್ದಾರ್ ಗಳು ಎರಡು ತಿಂಗಳಿಗೊಮ್ಮೆ ಸಭೆ ನಡಸಿ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.