ಬೆಂಗಳೂರು, ಜು 13 (DaijiworldNews/MS): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ತಿಂಗಳಿನಲ್ಲಿ 112 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ್ದೇವೆ. ಡ್ರಗ್ಸ್ ವಿಚಾರದಲ್ಲಿ ಸರ್ಕಾರ ಸದಾ ಕಠಿಣ ಕ್ರಮಕ್ಕೆ ಬದ್ಧವಾಗಿರುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬುಧವಾರ ಕಾಂಗ್ರೆಸ್ನ ಬಸವರಾಜ ರಾಯರಡ್ಡಿ ಅವರು ಕೊಪ್ಪಳ ಜಿಲ್ಲೆಯಲ್ಲಿನ ಅಕ್ರಮ ರೆಸಾರ್ಟ್ಗಳ ಕುರಿತು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಮಾದಕ ದ್ರವ್ಯ ಹಾವಳಿ ಹೆಚ್ಚಾಗಿ ಹರಡಿಕೊಂಡಿದ್ದು, ಯಾವುದೇ ಕಾರಣಕ್ಕೂ ರಾಜ್ಯವನ್ನು ಉಡ್ತಾ ಕರ್ನಾಟಕವಾಗಲು ಬಿಡುವುದಿಲ್ಲಎಂದು ಹೇಳಿದ್ದಾರೆ.
ಈ ಹಿಂದೇ ನಾನು ಗೃಹ ಸಚಿವನಾಗಿದ್ದಾಗ ಬೆಂಗಳೂರನ್ನು ಉಡ್ತಾ ಬೆಂಗಳೂರು ಆಗದಂತೆ ನಾನು ಕ್ರಮ ವಹಿಸಿದ್ದೆ. ಆದರೆ ಈ ಬಾರಿ ಪ್ರಾರಂಭದಿಂದಲೇ ಕಟ್ಟುನಿಟ್ಟಿನ ಕ್ರಮ ವಹಿಸಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ನಾನು ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಿ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹೀಗಾಗಿ ಇದರ ಭಾಗವಾಗಿ ಸರ್ಕಾರ ಬಂದ ಒಂದೂವರೆ ತಿಂಗಳಿನಲ್ಲಿ 112 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದೆ. ಕಳೆದ ಬಾರಿ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಡ್ರಗ್ಸ್ ಮುಕ್ತ ಮಂಗಳೂರು ಮಾಡುವಂತೆ ಅಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೀಗ ಪ್ರತಿಯೊಂದು ಜಿಲ್ಲೆಯಿಂದಲೂ ಇದೇ ಅಭಿಯಾನ ಆರಂಭಿಸಿ, ಬೆಂಗಳೂರು ಸೇರಿ ಎಲ್ಲಾ ಕಡೆಗೂ ಡ್ರಗ್ಸ್ ಹಾವಳಿ ನಿಲ್ಲಿಸಲು ಕಠಿಣ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.