ಬೆಂಗಳೂರು, ಜು 13 (DaijiworldNews/MS): ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಕೋಲಾರ ಜಿಲ್ಲೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಹೀಗಾಗಿ, ಇಡೀ ಜಿಲ್ಲೆ ಒಗ್ಗಟ್ಟಾಗುತ್ತಿದ್ದು ನಾವೆಲ್ಲ ಆಂಧ್ರ ಪ್ರದೇಶಕ್ಕೆ ಸೇರಲು ತೀರ್ಮಾನ ಮಾಡುತ್ತೇವೆ ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿ, ಯಾವ ಸರ್ಕಾರ ಬಂದರೂ ನಮ್ಮ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಸಿಕ್ಕಿಲ್ಲ. ಎತ್ತಿನಹೊಳೆ ಬದಲಿಗೆ ಬೆಂಗಳೂರಿನಿಂದ ಕೊಳಚೆ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರ ಹೇಳಿಕೆಗೆ ಸದನದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಬಳಿಕ ಮಾತನಾಡಿದ ಸಮೃದ್ಧಿ ಮಂಜುನಾಥ್, ‘ನಾನು ಯಾರಿಗೂ ನೋವುಂಟು ಮಾಡಲು ಈ ಮಾತು ಹೇಳಲಿಲ್ಲ. ನನ್ನ ಜಿಲ್ಲೆಯ ಜನರ ಕೂಗು ಅದು. ನಾನು ತಪ್ಪು ಮಾತನಾಡಿದ್ದರೆ ಸದನದ ಕ್ಷಮೆ ಕೇಳುತ್ತೇನೆ. ಆದರೆ, ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿಯ ನೀರನ್ನು ಮೂರನೇ ಹಂತದ ಶುದ್ಧೀಕರಿಸದೆ ಹೋದರೆ ಜಿಲ್ಲೆಯ ಜನ ವಿಷದ ನೀರು ಕುಡಿಯುವಂತಾಗುತ್ತದೆ. ಇದನ್ನು ಸರಿಪಡಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.