ಬೆಂಗಳೂರು, ಜು 14 (DaijiworldNews/HR): ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ಯಶಸ್ಸಿಗಾಗಿ ತಿರುಪತಿಗೆ ತೆರಳಿ ದೇವರಲ್ಲಿ ಪ್ರಾರ್ಥಿಸಿದ್ದು, ಇದಕ್ಕೆ ಪ್ರಗತಿಪರ ಚಿಂತಕರು ಖಂಡನೆ ವ್ಯಕ್ತಪಡಿಸಿದ್ದಾರೆ.
ಗುರುವಾರದಂದು ವಿಜ್ಞಾನಿಗಳ ತಂಡ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಚಂದ್ರಯಾನ-3 ಯಶಸ್ಸಿಗಾಗಿ ಪ್ರಾರ್ಥಿಸಿದ್ದರು.
ಇನ್ನು ವಿಜ್ಞಾನಿಗಳ ಈ ನಡೆಗೆ ಪ್ರಗತಿಪರರು ಅಸಮಾಧಾನ ಹೊರಹಾಕಿದ್ದು, ಈ ಕುರಿತು ತಮ್ಮ ಫೇಸ್ಬುಕ್ ವಾಲ್ನಲ್ಲಿ ಪೋಸ್ಟ್ ಮಾಡಿರುವ ಹಿರಿಯ ಸಾಹಿತಿ ಸನತ್ ಕುಮಾರ್ ಬೆಳಗಲಿ, ಪ್ರಪಂಚದಲ್ಲೇ ಖ್ಯಾತಿ ಹೊಂದಿರುವ ಇಸ್ರೋದಂತಹ ಸರ್ಕಾರಿ ಸ್ವಾಮ್ಯ ಸಂಸ್ಥೆ ನಡೆ ಸಾಮಾನ್ಯ ಜನರ ದಿಕ್ಕು ತಪ್ಪಿಸುವಂತಿದೆ. ತಾವೇ ಪರೀಕ್ಷಿಸಿ, ಸಂಶೋಧಿಸಿ ರೂಪಿಸಿರುವ ಯಾನದ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂಬುದನ್ನ ಈ ಮೂಲಕ ಸಾಬೀತುಮಾಡಿದ್ದಾರೆ. ಇದರಿಂದ ಆತ್ಮಸ್ಥೈರ್ಯ ಮತ್ತು ಸಂಶೋಧನೆಗಳ ಬಗೆಗೆ ಇರುವ ಅನುಮಾನಗಳು ವ್ಯಕ್ತವಾಗುತ್ತೆ ಎಂದು ವರೆದುಕೊಂಡಿದ್ದಾರೆ.