ಬೆಂಗಳೂರು, ಜು 15 (DaijiworldNews/AK): ಬಿಜೆಪಿ ಮುಕ್ತ ಭಾರತವನ್ನು ಮಾಡುತ್ತೇವೆ ಎಂದು ನಾವು ಹೇಳುವುದಿಲ್ಲ. ಬಿಜೆಪಿಯವರು ಎಂದಿಗೂ ಅಧಿಕಾರಕ್ಕೆ ಬರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿ ಅವರು, ಗ್ಯಾರೆಂಟಿಗಳಿಗೆ ಷರತ್ತುಗಳನ್ನು ಹಾಕಿದ್ದಿರಿ ಎಂದು ಈಗ ವಿರೋಧಪಕ್ಷದವರು ಟೀಕಿಸುತ್ತಿದ್ದಾರೆ. ಗೃಹ ಜ್ಯೋತಿಯಡಿ ಎಲ್ಲರಿಗೂ 200 ಯೂನಿಟ್ ಕೊಡಿ ಎನ್ನುವುದು ಅವರ ಅವಿವೇಕದ ತರ್ಕ. ಬಿಜೆಪಿಯವರು 7 ಜಿಲ್ಲೆಗಳಲ್ಲಿ ಮತಗಳನ್ನೇ ಪಡೆದಿಲ್ಲ. ಬಿಜೆಪಿ ಮುಕ್ತ ಭಾರತವನ್ನು ಮಾಡುತ್ತೇವೆ ಎಂದು ನಾವು ಹೇಳುವುದಿಲ್ಲ. ಬಿಜೆಪಿಯವರು ಎಂದಿಗೂ ಅಧಿಕಾರಕ್ಕೆ ಬರಬಾರದು ಎಂದು ಆಕ್ರೋಶವನ್ನು ಹೊರಹಾಕಿದರು.
ಉತ್ತರ ಯೂರೋಪ್ ದೇಶಗಳಲ್ಲಿ ಸಾರ್ವತ್ರಿಕ ಮೂಲ ಆದಾಯವನ್ನು ಪಾಲಿಸುತ್ತಿದ್ದಾರೆ. ಅದಕ್ಕೆ ನಾವು ಜನರ ಜೇಬಿಗೆ ದುಡ್ಡು ಹಾಕುತ್ತಿದ್ದೇವೆ.ಪಂಚ ಗ್ಯಾರೆಂಟಿಗಳ ಮೂಲಕ ಎಲ್ಲರಿಗೂ 5000 ರೂ. ಸಿಗುತ್ತದೆ. ಬಿಜೆಪಿಯವರು, ಅಕ್ಕಿ ಗೋಧಿ ಮೇಲೆ, ಹಾಲು ಮೊಸರು, ಪೆನ್ನು ಪೆನ್ಸಿಲ್ ಮೇಲೆ ಜಿಎಸ್ ಟಿ ಹಾಕುವ ಮೂಲಕ ಜೇಬಿನಿಂದ ಹಣ ಕಿತ್ತರು ಎಂದರು.
ಗ್ಯಾರೆಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿಗಳೇ ಹೇಳಿದ್ದಾರೆ. ಆದರೆ ನಾವು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಹಾಗೂ ರಾಜ್ಯ ದಿವಾಳಿಯಾಗುವುದಕ್ಕೂ ಬಿಡುವುದಿಲ್ಲ ಎಂದರು. ವಿರೋಧ ಪಕ್ಷದವರದು ಅವಿವೇಕದ ತರ್ಕಎಂದು ಆಕ್ರೋಶ ವ್ಯಕ್ತಪಡಿಸಿದ ಸಿಎಂ, ಆಯವ್ಯಯದಲ್ಲಿ 5 ಗ್ಯಾರೆಂಟಿಗಳಿಗೂ ಹಣ ನಿಗದಿಪಡಿಸಲಾಗಿದೆ. ಇಷ್ಟು ಹಣ ಎಲ್ಲಿಂದ ಬರುತ್ತದೆ , ರಾಜ್ಯ ಹೇಗೆ ನಡೆಸುತ್ತಾರೆ ಎಂದು ಟೀಕೆ ಮಾಡುತ್ತಾರೆ. ಇದು ವಿರೋಧ ಪಕ್ಷದವರ ಅವಿವೇಕದ ತರ್ಕ ಎಂದು ಆಕ್ರೋಶ ವ್ಯಕ್ತಪಡಿಸಿದರು.