ನವದೆಹಲಿ, ಜು 15 (DaijiworldNews/MS): ಫ್ರಾನ್ಸ್ ಪ್ರವಾಸದಿಂದ ಹೊರಟು ಅಬುಧಾಬಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಮಣಿಪುರ ಹೊತ್ತಿ ಉರಿಯುತ್ತಿದೆ. ಯುರೋಪಿಯನ್ ಪಾರ್ಲಿಮೆಂಟ್ ಭಾರತದ ಆಂತರಿಕ ವಿಷಯವನ್ನು ಚರ್ಚಿಸುತ್ತದೆ. ಆದರೆ, ಪ್ರಧಾನಿ ಒಂದೂ ಮಾತನಾಡಿಲ್ಲ. ಅಷ್ಟರಲ್ಲಿ ಅವರಿಗೆ ಬಾಸ್ಟಿಲ್ ಡೇ ಪರೇಡ್ಗೆ ಟಿಕೆಟ್ ಸಿಗುತ್ತದೆ' ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಹಿಂಸಾಚಾರ ಪೀಡಿತ ಮಣಿಪುರಕ್ಕೆ ಜೂನ್ 29, 30 ರಂದು ಎರಡು ದಿನಗಳ ಕಾಲ ಭೇಟಿ ನೀಡಿದ್ದರು ಮತ್ತು ಪರಿಹಾರ ಶಿಬಿರಗಳಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ್ದರು.
ಮಾತ್ರವಲ್ಲದೇ ಮಣಿಪುರದ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ಭೇಟಿಯಾಗಿ ಪರಿಹಾರ ಶಿಬಿರಗಳ ಸ್ಥಿತಿಯ ಬಗ್ಗೆ ತಿಳಿಸಿದ್ದರು ಮತ್ತು ಈಶಾನ್ಯ ರಾಜ್ಯದಲ್ಲಿ ಸಹಜ ಸ್ಥಿತಿಯನ್ನು ಮರಳಿ ತರುವಂತೆ ಮನವಿ ಮಾಡಿದ್ದರು.