ಕೊಚ್ಚಿ ಜು 15 (DaijiworldNews/AK) ವೃದ್ಧೆಯೊಬ್ಬರು ನದಿಯಲ್ಲಿ ಕೊಚ್ಚಿ ಹೋದರು ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ. ಗುರುವಾರ ಸಂಜೆ ಪುನೂರು ನದಿಗೆ, ಅನಕ್ಕಯಂ ನಿವಾಸಿಯಾಗಿರುವ ಕಮಲಾಕ್ಷಿ (78) ಅವರು ಸ್ನಾನಕ್ಕೆಂದು ಇಳಿದಿದ್ದಾರೆ.
ಈ ವೇಳೆ ನದಿಯಲ್ಲಿ ನೀರಿನ ರಭಸಕ್ಕೆ ವೃದ್ಧೆ ಕಮಲಾಕ್ಷಿ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ಆದರೆ ಕಮಲಾಕ್ಷಿ ಅವರು ನೀರಿನ ರಭಸದ ನಡುವೆ ಗಿಡಗಳ ಗೆಲ್ಲುಗಳನ್ನು ಹಿಡಿದು ನಿಂತಿದ್ದಾರೆ. ಕಮಲಾಕ್ಷಿ ಅವರ ಕತ್ತಿನವರೆಗೆ ನೀರು ಇದ್ದರೂ , ಅವರು ರಾತ್ರೀಯಿಡೀ ನೀರಿನಲ್ಲೇ ಜೀವ ಕೈಯಲ್ಲಿ ಹಿಡಿದು ನಿಂತಿದ್ದಾರೆ. ನೀರಿನಲ್ಲೇ ಸಿಲುಕಿದ ಪರಿಣಾಮ ವೃದ್ಧೆ ಮಾತನಾಡಲು ಆಗದೇ ಯಾರ ಸಹಾಯವನ್ನು ಕೇಳದ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರು. ಶುಕ್ರವಾರದಂದು ಮರದ ಕೋಲಿನ ಸಹಾಯ ಪಡೆದು ನದಿಯಲ್ಲಿದ್ದ ಬಂಡೆಯ ಮೇಲೆ ಆಶ್ರಯವನ್ನು ಪಡೆದಿದ್ದಾರೆ.
ಬಳಿಕ ಸ್ಥಳೀಯರು ಹಾಗೂ ನರಿಕ್ಕುಣಿ ಅಗ್ನಿಶಾಮಕ ರಕ್ಷಣಾ ತಂಡದವರು ಪತ್ತೆ ಮಾಡಿ ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ.ವೈದ್ಯಕೀಯ ತಪಾಸಣೆಗಾಗಿ ತಾಮರಸ್ಸೆರಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ಕಮಲಾಕ್ಷಿ ಅವರನ್ನು ದಾಖಲು ಮಾಡಿ ಬಿಡುಗಡೆಗೊಳಿಸಲಾಗಿದೆ ಎಂದು ವರದಿಯಾಗಿದೆ.