ಲಖನೌ, ಜು 15 (DaijiworldNews/AK) 2019ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ವಿರುದ್ಧ ದಾಖಲಾಗಿದ್ದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಂಪುರ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಅಜಂ ಖಾನ್, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ಅವರ ಜತೆಗಿನ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಔಂಜನೇಯ ಕುಮಾರ್ ಸಿಂಗ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು. ಈ ಕಾರಣಕ್ಕೆ ಅಜಂ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅಜಂ ಖಾನ್ ಮಾಡಿದ ಭಾಷಣದ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಂಪುರ ಜಿಲ್ಲೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಚೌಹಾಣ್ ಅವರು ವೀಡಿಯೊವನ್ನು ಸಾಕ್ಷಿಯಾಗಿರಿಸಿಕೊಂಡು ಶಹಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2019ರಲ್ಲಿ ದ್ವೇಷ ಭಾಷಣದ ಮತ್ತೊಂದು ಪ್ರಕರಣದಲ್ಲಿ ಅಜಂ ಖಾನ್ ಅವರನ್ನು ದೋಷಿ ಎಂದು ಘೋಷಿಸಲಾಯಿತು. ಅಕ್ಟೋಬರ್ 17, 2022ರಂದು ಜನಪ್ರತಿನಿಧಿಗಳ ನ್ಯಾಯಾಲಯವು ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿತು. ನಂತರ ಅವರನ್ನು ಉತ್ತರ ಪ್ರದೇಶ ವಿಧಾನಸಭೆಯಿಂದ ಅನರ್ಹಗೊಳಿಸಲಾಗಿತ್ತು. 2023ರ ಮೇ ತಿಂಗಳಲ್ಲಿ ಇವರನ್ನು ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯವು ಅವರ ಮೇಲಿನ ದೋಷಾರೋಪಣೆಯನ್ನು ರದ್ದುಗೊಳಿಸಿತು ಮತ್ತು ಪ್ರಕರಣದಲ್ಲಿ ಅಜಂ ಖಾನ್ ಅವರನ್ನು ಖುಲಾಸೆಗೊಳಿಸಿತು. ಈಗಾಗಲೇ ಅಜಂ ಖಾನ್ ಮೇಲೆ ಅನೇಕ ಪ್ರಕರಣಗಳಿದ್ದು, ಅದರ ವಿಚಾರಣೆ ಕೂಡ ಕೋರ್ಟ್ನಲ್ಲಿ ನಡೆಯುತ್ತಿದೆ.