ನವದೆಹಲಿ, ಜು 16 (DaijiworldNews/HR): ಬಿಜೆಪಿಯನ್ನು 2024ರ ಲೋಕಸಭೆ ಚುನಾವಣೆಯಲ್ಲಿ ಸೋಲಿಸುವುದಕ್ಕಾಗಿ ನಾಳೆಯಿಂದ ಬೆಂಗಳೂರಿನಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಭಾಗಿಯಾಗಲಿದೆ ಎಂದು ಪಕ್ಷದ ನಾಯಕ ರಾಘವ್ ಚಡ್ಡಾ ತಿಳಿಸಿದ್ದಾರೆ.
ಇಂದು ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ರಾಘವ್ ಚಡ್ಡಾ, ದೆಹಲಿಯಲ್ಲಿ ಆಡಳಿತ ನಿಯಂತ್ರಣ ಸೇವೆಗಳ ಕುರಿತು ಕೇಂದ್ರದ ಸುಗ್ರೀವಾಜ್ಞೆಯನ್ನು ಸಂಸತ್ತಿನಲ್ಲಿ ವಿರೋಧಿಸುವ ಕಾಂಗ್ರೆಸ್ ನಿರ್ಧಾರವನ್ನು ಶ್ಲಾಘಿಸಿದ ಅವರು ನಾಳೆ ಬೆಂಗಳೂರಿನಲ್ಲಿ ಔತಣಕೂಟದಿಂದ ಪ್ರಾರಂಭವಾಗುವ ವಿಪಕ್ಷಗಳ ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಭಾಗವಹಿಸಲಿದೆ ಎಂದರು.
ಇನ್ನು ದೆಹಲಿ ಆಡಳಿತ ಸೇವೆ ಕುರಿತ ಕೇಂದ್ರದ ಸುಗ್ರೀವಾಜ್ಞೆಯನ್ನು ಸಂಸತ್ತಿನಲ್ಲಿ ಕಾಂಗ್ರೆಸ್ ವಿರೋಧಿಸಿದರೆ ಮಾತ್ರ ಬೆಂಗಳೂರಿನಲ್ಲಿ ಸಭೆ ಸೇರುವುದಾಗಿ ಆಮ್ ಆದ್ಮಿ ಪಕ್ಷ ಈ ಹಿಂದೆ ಹೇಳಿತ್ತು. ಅದರಂತೆ ನಾಳೆ ನಡೆಯಲಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಭಾಗಿಯಾಗಲಿದೆ.