ಚಿಕ್ಕಮಗಳೂರು, ಜು 16 (DaijiworldNews/HR): ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ನಮ್ಮ ಹಂತದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಇಲ್ಲ, ಮಿತ್ರರೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಡಾ ಕುರಿತು ಪ್ರತಿಕ್ರಿಯಿಸಿದ ಅವರು, ನೇಷನ್ ಫಸ್ಟ್, ಪಾರ್ಟಿ ನೆಕ್ಸ್ಟ್, ಪರ್ಸನ್ ಲಾಸ್ಟ್ ಅನ್ನೋ ತತ್ವದ ಮೇಲೆ ನಂಬಿಕೆ ಇಟ್ಟವರು. ನೇಷನ್ ಫಸ್ಟ್ ಎಂಬ ತತ್ವದ ಮೇಲೆ ಯಾರು ಬೇಕಾದರೂ ನಮ್ಮ ಜತೆ ಬರಬಹುದು. ರಾಜಕಾರಣ ನಿಂತ ನೀರಲ್ಲ, ಅದು ಹರಿಯುವ ನದಿ ಇದ್ದಂತೆ. ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಇಲ್ಲ, ಮಿತ್ರರೂ ಇಲ್ಲ ಎಂದರು.
ಇನ್ನು ರಾಷ್ಟ್ರದ ಹಿತಾಸಕ್ತಿ, ಮೋದಿ ನೇತೃತ್ವದ ರಾಷ್ಟ್ರ ಹಿತ ಹಾಗೂ ಜನಪರ ಕೆಲಸ ಮೆಚ್ಚಿ ಯಾರು ಬೇಕಾದರೂ ಬರಬಹುದು. ಎನ್ ಡಿಎ ಹಾಗೂ ಬಿಜೆಪಿ ಜತೆ ಯಾರು ಬೇಕಾದರೂ ಬರಬಹುದು. ಜೆಡಿಎಸ್ ಜತೆ ಮೈತ್ರಿ ಕುರಿತಂತೆ ನಮ್ಮ ಹಂತದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಮೇಲ್ಮಟ್ಟದಲ್ಲಿ ಆಗಿದ್ದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಯಾರನ್ನೂ ದೂರ ಇಟ್ಟು ರಾಜಕಾರಣ ಮಾಡುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರಲ್ಲ ಎಂದು ಹೇಳಿದ್ದಾರೆ.