ಬೆಂಗಳೂರು,ಏ 03(MSP): ಕುಟುಂಬ ರಾಜಕಾರಣ, ವಂಶಪಾರಂಪರ್ಯ ರಾಜಕಾರಣ ನನಗೆ ಹಿಡಿಸಲಿಲ್ಲ ಇದೇ ಕಾರಣಕ್ಕೆ ಬಹಳ ಯೋಚನೆ ಮಾಡಿ ಅಂತಿಮವಾಗಿ ಕಾಂಗ್ರೆಸ್ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದೆ ಎಂದು ಬಿಜೆಪಿ ಹಿರಿಯ ಮುಖಂಡ ಎಸ್.ಎಂ ಕೃಷ್ಣ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಂಶಪಾರಂಪರ್ಯ ರಾಜಕಾರಣ ಹಿಡಿಸಲಿಲ್ಲ. ಅದಕ್ಕೆ ಕಾಂಗ್ರೆಸ್ ಪಕ್ಷ ಬಿಟ್ಟು ಹೊರಬಂದೆ ಅರ್ಹತೆ ಇದ್ದರೆ ಪರವಾಗಿಲ್ಲ ಯಾಕೆಂದರೆ ರಾಜೀವ್ ಗಾಂಧಿಯವರಿಗೆ ವಂಶ ರಾಜಕಾರಣದ ಅರ್ಹತೆ ಇತ್ತು. ಆದರೆ ಹಾಗೆಂದು ಹುಟ್ಟು ರಾಜಕಾರಣ ಸಲ್ಲದು. ಆದ್ರೆ ಈಗ ಕಾಂಗ್ರೆಸ್ ಪಕ್ಶದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಇನ್ನು ಅಲ್ಲಿ ಉಳಿಯುವ ಸಾಧ್ಯತೆ ಇಲ್ಲವಾದಾಗ ಅಂತಿಮ ನಿರ್ಧಾರ ಕೈಗೊಂಡೆ. ಕಾಂಗ್ರೆಸ್ ಜೊತೆಗಿನ ಸಂಬಂಧ ಕಡಿದುಕೊಳ್ಳುವುದು ಅನಿವಾರ್ಯವಾಗಿತ್ತು ಪಕ್ಷ ತೊರೆದೆ ಎಂದರು.
ಇನ್ನು ನಾನು ಬಿಜೆಪಿಗೆ ಸೇರ್ಪಡೆ ಆಗಲು ನರೇಂದ್ರ ಮೋದಿಯವರೇ ಪ್ರಮುಖ ಕಾರಣ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಕಳೆದ ಐದು ವರ್ಷದಲ್ಲಿ ಮೋದಿ ಕಳಂಕರಹಿತ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಮೋದಿ ಅನುವಂಶೀಯ ರಾಜಕೀಯದಿಂದ ಬಂದ ವ್ಯಕ್ತಿಯಲ್ಲ. ತಮ್ಮ ಕುಟುಂಬಸ್ಥರಿಗಾಗಿ ಮೋದಿ ಯಾವುದೇ ಸ್ಥಾನದ ಮೇಲೆ ಕರ್ಚೀಫ್ ಇಟ್ಟವರಲ್ಲ. ಈ ವಿಚಾರ ನನ್ನನ್ನು ತೀವ್ರವಾಗಿ ಆಕರ್ಷಿಸಿತು. ಹೀಗಾಗಿ ಮೋದಿಯವರನ್ನು ಮತ್ತೆ ಗೆಲ್ಲಿಸಬೇಕಿದೆ ಎಂದರು.