ಚೆನ್ನೈ, ಜು 18 (DaijiworldNews/HR): ತಮಿಳುನಾಡಿನಲ್ಲಿ ಮಹಿಳೆಯೊಬ್ಬರು ತಾನು ಸತ್ತರೆ ಮಗನ ಕಾಲೇಜು ಶುಲ್ಕವನ್ನು ಸರ್ಕಾರ ಭರಿಸುತ್ತದೆ ಎಂದು ಚಲಿಸುತ್ತಿರುವ ಬಸ್ಸಿನ ಮುಂದೆ ಹಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಪಾಪತಿ(45) ಎಂದು ಗುರುತಿಸಲಾಗಿದೆ.
ಮಹಿಳೆಯು ಕಳೆದ 15 ವರ್ಷದಿಂದ ಗಂಡನಿಂದ ದೂರವಾಗಿ ಕಷ್ಟಪಟ್ಟು ಮಗನನ್ನು ಸಾಕಿ ಬೆಳೆಸಿದ್ದು, ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ಕಳೆದ ಕೆಲ ಸಮಯದಿಂದ ಸ್ವಚ್ಛತೆಯ ಕೆಲಸವನ್ನು ಮಾಡುತ್ತಿದ್ದರು. ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಪಾಪತಿ ಖಿನ್ನತೆಗೆ ಒಳಗಾಗಿದ್ದರು.
ಈ ವೇಳೆ ಯಾರೋ ಒಬ್ಬರು ಪಾಪತಿಯ ಬಳಿ ನೀನು ಅಪಘಾತದಲ್ಲಿ ಸತ್ತರೆ ನಿನ್ನ ಮಗನ ಕಾಲೇಜು ಶುಲ್ಕದೊಂದಿಗೆ, ಆತನ ಭವಿಷ್ಯವನ್ನು ಸರ್ಕಾರ ನೋಡಿಕೊಳ್ಳುತ್ತದೆ ಎಂದಿದ್ದರು.
ಇನ್ನು ಮೊದಲೇ ಖಿನ್ನತೆಗೆ ಒಳಗಾಗಿದ್ದ ಪಾಪತಿ ಈ ಮಾತನ್ನು ನಿಜವೆಂದು ನಂಬಿ ಚಲಿಸುತ್ತಿರುವ ಬಸ್ಸಿನ ಮುಂದೆ ಹೋಗಿ ನಿಂತಿದ್ದಾರೆ. ವೇಗವಾಗಿ ಬರುತ್ತಿದ್ದ ಬಸ್ ಪಾಪತಿ ಅವರ ಮೇಲೆ ಹರಿದಿದೆ.