ಕೊಟ್ಟಿಗೆಹಾರ, ಜು 18 (DaijiworldNews/HR): ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಬ್ಗಲ್ ಸಮೀಪದ ಹಾದಿ ಓಣಿ ಗ್ರಾಮದಲ್ಲಿ ವಿದ್ಯುತ್ ತಂತಿಯೊಂದು ರಸ್ತೆ ಬದಿ ಒಣಗಿ ನಿಂತಿದ್ದ ಮರಕ್ಕೆ ತಗುಲಿ ಬೆಂಕಿ ಹತ್ತಿ ಉರಿದ ಘಟನೆ ನಡೆದಿದೆ.
ಈ ಮಾರ್ಗ ರಾಜ್ಯ ಹೆದ್ದಾರಿಯಾಗಿದ್ದು, ಮೂಡಿಗೆರೆಯಿಂದ ಕೊಟ್ಟಿಗೆಹಾರ ಮುಖಾಂತರ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಹಾಗೂ ಕಳಸಕ್ಕೆ ಹೋಗುವ ಸಾವಿರಾರು ವಾಹನಗಳು ನಿತ್ಯ ಓಡಾಡುತ್ತವೆ.
ಇನ್ನು ಮರ ಹೊತ್ತಿ ಉರಿದ ಬಳಿಕ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದು, ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ತುಂಡಾದ ವಿದ್ಯುತ್ ತಂತಿ ರಸ್ತೆಯಲ್ಲಿ ಸಂಚರಿಸುವ ಯಾವುದಾದರೂ ವಾಹನದ ಮೇಲೆ ಬಿದ್ದಿದ್ದರೆ ವಾಹನ ಕೂಡ ವಿದ್ಯುತ್ ತಂತಿಯಿಂದ ಹೊತ್ತಿ ಉರಿಯುವ ಸಾಧ್ಯತೆ ಇತ್ತು. ಆದರೆ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ನವೀನ್ ಎಂಬವರು ಮರ ಹೊತ್ತಿ ಉರಿಯುವುದನ್ನು ಕಂಡು ಕೂಡಲೇ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.
ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿ ವಿದ್ಯುತ್ ತಂತಿಗೆ ಅಡ್ಡ ಇರುವ ಮರಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.