ಮಹಾರಾಷ್ಟ್ರ, ಜು 19 (DaijiworldNews/HR): ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳಿಗೆ ಬೇಕಾಗಿದ್ದ ಇಬ್ಬರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಇಮ್ರಾನ್ ಖಾನ್ ಮತ್ತು ಎಂಡಿ ಯೂನಸ್ ಸಾಕಿ ಎಂದು ಗುರುತಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಬೈಕ್ ಕಳ್ಳತನದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ್ದು, ಈ ಇಬ್ಬರು ಆರೋಪಿಗಳು ರಾಜಸ್ಥಾನದಲ್ಲಿ ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪ್ರಕರಣದಲ್ಲಿ ಎನ್ಐಎಗೆ ಬೇಕಾಗಿದ್ದರು ಎಂದು ತಿಳಿಸಿದ್ದಾರೆ.
ಇನ್ನು ಮಂಗಳವಾರ ನಸುಕಿನ ವೇಳೆ ಪೊಲೀಸರು ಗಸ್ತು ತಿರುಗುತ್ತಿದ್ದ ಮಹಾರಾಷ್ಟ್ರದ ಪುಣೆ ನಗರದ ಕೊತ್ರುದ್ ಪ್ರದೇಶದಲ್ಲಿ ಬೈಕ್ ಕದಿಯಲು ಯತ್ನಿಸುತ್ತಿದ್ದ ಮೂವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅವರಲ್ಲಿ ಓರ್ವ ಪರಾರಿಯಾಗಿದ್ದು, ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಆರೋಪಿಗಳನ್ನು ಪುಣೆ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಜಂಟಿಯಾಗಿ ವಿಚಾರಣೆ ನಡೆಸಿದ್ದು, ಈ ಇಬ್ಬರು ಆರೋಪಿಗಳು ಎನ್ಐಎಗೆ ಬೇಕಾಗಿದ್ದಾರೆ ಎಂದು ತನಿಖೆಯ ಸಮಯದಲ್ಲಿ ತಿಳಿದು ಬಂದಿರುವುದಾಗಿ ಪೊಲೀಸ್ ಕಮಿಷನರ್ ರೆತೇಶ್ ಕುಮಾರ್ ತಿಳಿಸಿದ್ದಾರೆ.
ಇನ್ನು ಆರೋಪಿಗಳ ಮನೆಯಿಂದ ನಾಲ್ಕು ಮೊಬೈಲ್ ಫೋನ್ಗಳು ಮತ್ತು ಲ್ಯಾಪ್ಟಾಪ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಿಗಾಗಿ ಅವರನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.