ನವದೆಹಲಿ, ಜು 19 (DaijiworldNews/AK): ಈ ವರ್ಷದಿಂದ ಅತ್ಯುತ್ತಮ ವೆಬ್ ಸೀರೀಸ್ ತಯಾರಕರಿಗೆ ಪ್ರಶಸ್ತಿ ನೀಡುವುದಾಗಿ ಕೇಂದ್ರ ಸಚಿವ ಅನುರಾಗ ಠಾಕೂರ್ ಘೋಷಿಸಿದೆ. ನವೆಂಬರ್ 20 ರಿಂದ ನಡೆಯಲಿರುವ ಗೋವಾ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಇದೀಗ ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ವೆಬ್ ಸೀರೀಸ್ಗಳು ನೋಡುಗರ ಗಮನ ಸೆಳೆಯುತ್ತಿದೆ. ಇದನ್ನು ಉತ್ತೇಜಿಸುವ ದೃಷ್ಟಿಯಿಂದ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ವೆಬ್ ಸೀರೀಸ್ ಆಯ್ಕೆಯ ಮಾನದಂಡದ ಬಗ್ಗೆಯೂ ತಿಳಿಸಿದ ಅವರು, ಅತ್ಯುತ್ತಮ ಕಥೆ, ತಾಂತ್ರಿಕ ಶ್ರೀಮಂತಿಕೆ, ಹೇಳುವ ಕ್ರಮ ಹಾಗೂ ಜನರ ಮೇಲೆ ಬೀಳುವ ಪರಿಣಾಮ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ಠಾಕೂರ್ ತಿಳಿಸಿದ್ದಾರೆ. ಈ ಪ್ರಶಸ್ತಿಯು ಓಟಿಟಿ ವೇದಿಕೆಯ ಮೇಲೆ ಬಂಡವಾಳ ಹೂಡುವವರಿಗೆ ಉತ್ತೇಜಿಸುವ ಜೊತೆಗೆ ಪ್ರತಿಭೆಗಳನ್ನೂ ಗುರುತಿಸುವಂತಾಗಲಿದೆ ಎಂದರು.