ಬೆಂಗಳೂರು, ಜು 19 (DaijiworldNews/AK):ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ ಹಿನ್ನೆಲೆ ರಾಜ್ಯದ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.ಇದರ ಮಧ್ಯೆ ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದು, 7 ದಿನ ಕಾಲ ವಶಕ್ಕೆ ನೀಡಲಾಗಿದೆ.
ತನಿಖಾಧಿಕಾರಿ ಎಸಿಪಿ ಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಎನ್ಐಎ ವಿಶೇಷ ಕೋರ್ಟ್ಗೆ ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಆವರಣದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಶಂಕಿತ ಉಗ್ರರ ಬಂಧನ ಬಳಿಕ ವಿಜಯಪುರ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದಾರೆ. ರೈಲು ನಿಲ್ದಾಣದಲ್ಲಿ ಬಾಂಬ್ ಪತ್ತೆ ದಳ, ಶ್ವಾನದಳದಿಂದ ತಪಾಸಣೆ ಮಾಡುತ್ತಿದ್ದು, ರೈಲ್ವೆ ಪ್ರಯಾಣಿಕರ ಬ್ಯಾಗ್ಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.
ಇನ್ನು ಈ ಕುರಿತು ವಿಧಾನಸಭೆಯಲ್ಲಿ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಕೆಲವರು ಬೇಲ್ ಮೇಲೆ ಬಿಡುಗಡೆಯಾಗಿ ವಿಚಾರಣೆ ಎದುರಿಸ್ತಿದ್ದಾರೆ. ಕೆಲವರು ಕೊಲೆ, ದರೋಡೆ ಸೇರಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಯಾವ ಸಂಘಟನೆ ಜತೆ ಗುರುತಿಸಿಕೊಂಡಿದ್ದರು ಎಂಬ ಬಗ್ಗೆ ತನಿಖೆಯಲ್ಲಿ ತಿಳಿಯಬೇಕಾಗಿದೆ ಎಂದು ಹೇಳಿದರು.