ನವದೆಹಲಿ, ಜು 20 (DaijiworldNews/MS): 24 ವರ್ಷದ ಯುವಕನೋರ್ವ ಜಿಮ್ ನ ಟ್ರೆಡ್ಮಿಲ್ನಲ್ಲಿ ರನ್ನಿಂಗ್ ಮಾಡುತ್ತಿರುವಾಗ ವಿದ್ಯುತ್ ಹರಿದು ಸಾವನ್ನಪ್ಪಿದ ಘಟನೆ ಉತ್ತರ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.
ಮೃತನನ್ನು ಸಕ್ಷಮ್ ಪೃತಿ ಎಂದು ಗುರುತಿಸಲಾಗಿದೆ. ಪೃತಿ ಬಿಟೆಕ್ ಮುಗಿಸಿ ಗುರುಗ್ರಾಮ್ ಮೂಲದ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.ರೋಹಿಣಿ ಸೆಕ್ಟರ್ 19 ರ ನಿವಾಸಿಯಾಗಿರುವ ಪೃತಿ ಸೆಕ್ಟರ್ 15 ರ ಜಿಂಪ್ಲೆಕ್ಸ್ ಫಿಟ್ನೆಸ್ ಕ್ಲಾಸ್ಗೆ ಹೋಗುತ್ತಿದ್ದರು.
ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಟ್ರೆಡ್ ಮಿಲ್ನಲ್ಲಿ ರನ್ನಿಂಗ್ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ವಿದ್ಯುದಾಘಾತವೇ ಸಾವಿಗೆ ಕಾರಣ ಎಂದು ದೃಢಪಟ್ಟಿದೆ.
ಜಿಮ್ ಮ್ಯಾನೇಜರ್ ಅನುಭವ್ ದುಗ್ಗಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನರಹತ್ಯೆ ಮತ್ತು ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.