ಬೆಂಗಳೂರು, ಜು 22 (DaijiworldNews/AK):ಕರ್ನಾಟಕ ರಫ್ತಿನಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕು. ಮಹಾರಾಷ್ಟ್ರ ಮತ್ತು ತಮಿಳುನಾಡು ಒಂದು ಮತ್ತು 2 ನೇ ಸ್ಥಾನದಲ್ಲಿವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ,ಕರ್ನಾಟಕ ರಫ್ತು ಮಾಡುವುದರಲ್ಲಿ ಮೊದಲಿನಿಂದಲೂ ಮುಂಚೂಣಿಯಲ್ಲಿದೆ. ಕೈಗಾರಿಕೆಗಳ ಅಭಿವೃದ್ಧಿ ಯಾಗಬೇಕೆಂದು ಕೌಶಲ್ಯ ತರಬೇತಿಯುಳ್ಳ ಕಾರ್ಮಿಕರಿದ್ದರೆ ಕೈಗಾರಿಕಾ ಬೆಳವಣಿಗೆಗೆ ಅನುಕೂಲ ವಾಗುತ್ತದೆ ಎಂಬ ದೃಷ್ಟಿಯಿಂದ ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಾರಂಭಿಸಲಾಗಿತ್ತು. ಈಗ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದರು ಕೈಗಾರಿಕೆ ಬೆಳೆದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ದೇಶದ ಆರ್ಥಿಕತೆ ಬೆಳೆಯಲು ನೆರವಾಗಲಿದೆ.
ಸರ್ಕಾರ 5 ಗ್ಯಾರಂಟಿ ಗಳನ್ನು ಘೋಷಿಸಿದ್ದು, ಯುವನಿಧಿಯಡಿಯಲ್ಲಿ 2022-23 ರಲ್ಲಿ ಪದವೀಧರರಾಗಿ ನಿರುದ್ಯೋಗಿ ಗಳಾಗಿರುವವರಿಗೆ ಮೂರು ಸಾವಿರ ರೂ.ಗಳ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು.ಡಿಪ್ಲೊಮಾ ಹೊಂದಿದವರಿಗೂ 1500 ರೂ.ಗಳ ಭತ್ಯೆಯನ್ನು ನೀಡಲಾಗುವುದು. ಬಹುತೇಕ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ ಎಂದರು.
ಇಂದು 68 ಉದ್ದಿಮೆಗಳಿಗೆ ಶ್ರೇಷ್ಠ ರಫ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ರಫ್ತು ನಲ್ಲಿ ಸಾಧನೆ ಮಾಡಿರುವ ಉದ್ದಿಮೆಗಳಿಗೆ 1992-93 ರಿಂದ ಶ್ರೇಷ್ಠ ರಫ್ತು ಪ್ರಶಸ್ತಿಗಳನ್ನು ನೀಡುವ ಪರಿಪಾಠ ಪ್ರಾರಂಭಿಸಲಾಗಿದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಉದ್ದಿಮೆಗಳನ್ನು ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ವಿಜೇತರು ಇತರ ಉದ್ದಿಮೆದಾರರಿಗೆ ಮಾದರಿ ಹಾಗೂ ಸ್ಪೂರ್ತಿಯಾಗಿದ್ದಾರೆ ಎಂದು ತಿಳಿಸಿದರು.