ಸೂಲಿಬೆಲೆ, ಎ04(SS): ಬಯಲು ಸೀಮೆಗೆ ಎತ್ತಿನ ಹೊಳೆಯ ನೀರು ಹರಿಸದೆ ನಾನು ಪ್ರಾಣ ಬಿಡಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಸೂಲಿಬೆಲೆ ಸಂತೆ ಮೈದಾನದಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ನಾನು ಸುಳ್ಳುಗಾರನಲ್ಲ. ಕೊಟ್ಟ ಮಾತಿನಂತೆ ಎತ್ತಿನಹೊಳೆ ಯೋಜನೆಯನ್ನು ತರಲು ಸಾಕಷ್ಟು ಶ್ರಮಿಸಿದ್ದೇನೆ. ಎತ್ತಿನ ಹೊಳೆಯಿಂದ ನಾನು ನೀರು ಕೊಡದೆ ಪ್ರಾಣ ಬಿಡಲ್ಲ ಎಂದು ತಿಳಿಸಿದರು.
ಎತ್ತಿನ ಹೊಳೆ ವಿಚಾರವಾಗಿ ಕೆಲವರು ಹಸಿರು ಪೀಠ ಮತ್ತು ಸುಪ್ರಿಂ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಇದಕ್ಕೆ ಹಣಕಾಸಿನ ನೆರವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎತ್ತಿನ ಹೊಳೆಯಿಂದ ನೀರು ತರುವ ವಿಚಾರದಲ್ಲಿ ಈಗಲೂ ಬದ್ಧನಾಗಿದ್ದೇನೆ. ಪ್ರತಿ ಮನೆಗೆ ಉದ್ಯೋಗ, ಜಲ ಸಮೃದ್ಧಿ ಮಾಡಿ ಜನರ ಜೀವನ ಮಟ್ಟ ಬದಲಾವಣೆಯೇ ನನ್ನ ಧ್ಯೇಯವಾಗಿದೆ. ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.
ನಾನು ನನ್ನ ಅಧಿಕಾರ ಅವಧಿಯಲ್ಲಿ ಕಳಂಕ ರಹಿತನಾಗಿ ಸತ್ಯ ಧರ್ಮದಿಂದ ನಡೆದುಕೊಂಡಿದ್ದೇನೆ. ತಪಿಸ್ವಿಯಂತೆ ಮಹಾಕಾವ್ಯಗಳನ್ನು ರಚನೆ ಮಾಡಿರುವ ನನ್ನನ್ನು ಸುಳ್ಳುಗಾರನೆಂದು ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.